ಬೆಳಗಾವಿ: ಸಂಸದ ಅನಂತಕುಮಾರ್ ಹೆಗಡೆ ಅವರು ಭಾಗವಹಿಸಿದ್ದ ಸರ್ಕಾರಿ ಕಾರ್ಯಕ್ರಮಕ್ಕೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ಆಹ್ವಾನ ನೀಡದೇ ತಾಲೂಕಾಡಳಿತ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಖಾನಾಪುರ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ ಆಹ್ವಾನ ನೀಡದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆಗೆ ಮುಂದಾದರು. 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಖಾನಾಪುರ ತಾಲೂಕಿನ ವಿವಿಧೆಡೆ ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಭೂಮಿ ಪೂಜೆ ಇತ್ತು. ಭೂಮಿ ಪೂಜೆಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಆಹ್ವಾನ ನೀಡಿಲ್ಲವೆಂದು ಆರೋಪಿಸಿ ಕೈ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮುಂದುವರೆಸಿದರು.
ಕೈ ನಾಯಕಿ ಮೇಲೆ ಪೇದೆಯಿಂದ ದೌರ್ಜನ್ಯ ಆರೋಪ: ಸಂಸದರ ಸರ್ಕಾರಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಆಹ್ವಾನಿಸದ ಆರೋಪದ ಹಿನ್ನೆಲೆಯಲ್ಲಿ ಖಾನಾಪುರ ತಹಶೀಲ್ದಾರ್ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ತಾಲೂಕು ಮಹಿಳಾ ಅಧ್ಯಕ್ಷೆ ಮೇಲೆ ಮಹಿಳಾ ಪೇದೆಗಳಿಂದ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ. ಖಾನಾಪುರ ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ದಂಡಗಲ್ ಅವರೇ ನನ್ನ ಕೂದಲು ಹಿಡಿದು ಎಳೆದಾಡಿ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿದ್ದಾರೆ.
ತಮ್ಮ ಮೇಲೆ ದೌರ್ಜನ್ಯ ಎಸೆಗಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಅವರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.