ಬೆಳಗಾವಿ: ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಪೌರ ಕಾರ್ಮಿಕನೊಬ್ಬ ವಾಹನದಿಂದ ಕೆಳಗಡೆ ಬಿದ್ದು ಸಾವನ್ನಪ್ಪಿದ ಕಾರಣ ಆತನ ಕುಟುಂಬಕ್ಕೆ ಈ ಕೂಡಲೇ 10 ಲಕ್ಷ ರೂ. ಪರಿಹಾರ ಧನ ನೀಡಬೇಕೆಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು.
ಬೆಳಗ್ಗೆಯಿಂದಲೇ ಮಹಾನಗರ ಕಚೇರಿ ಎದುರಿಗೆ ಪ್ರತಿಭಟನೆ ನಡೆಸುತ್ತಿದ್ದ ಪೌರ ಕಾರ್ಮಿಕರ ಪ್ರತಿಭಟನೆಗೆ ಸಾಥ್ ನೀಡಿದ ಶಾಸಕಿ ಸರ್ಕಾರ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಪೌರಕಾರ್ಮಿಕರ ಜೊತೆಗೆ ನೆಲದ ಮೇಲೆಯೇ ಕುಳಿತ ಲಕ್ಷ್ಮೀ ಹೆಬ್ಬಾಳ್ಕರ್, ನಗರವನ್ನು ಸ್ವಚ್ಛ ಮಾಡುವ ಕಾರ್ಮಿಕರ ಕಷ್ಟಗಳಿಗೆ ಸರ್ಕಾರ, ಇಲಾಖೆ ಸ್ಪಂದಿಸಬೇಕು. ಹೂವು, ಹಾರ, ಶಾಲು ಹಾಕಿ ಕಳುಹಿಸಿದರೆ ಸಾಲದು. ಮೃತನ ಕುಟುಂಬ ಬೀದಿಗೆ ಬಿದ್ದಿದೆ. ಆತನಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್.ಅವರಿಗೆ, ಬ್ಲಾಕ್ ಲಿಸ್ಟ್ ಇದ್ದವರಿಗೆ ಪರವಾನಗಿ ನೀಡಿದ್ದೀರಿ. ವಾಹನ ಲೈಸನ್ಸ್ ಇಲ್ಲದಿರುವವರಿಗೆ ವಾಹನ ಚಾಲನೆ ಮಾಡಲು ನೀಡಿದ್ದೀರಿ. ಜೊತೆಗೆ ಆರ್‌ಟಿಒ ಇಲಾಖೆಯ ಸರ್ಟಿಫಿಕೇಟ್ ಇರದ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಅವಕಾಶ ನೀಡಿದ್ದೀರಿ. ಇದಕ್ಕೆ ಜವಾಬ್ದಾರಿ ಸರ್ಕಾರ ಮತ್ತು ಪಾಲಿಕೆ ಆಗುತ್ತೆ. ಹೀಗಾಗಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಜವಾಬ್ದಾರಿಯನ್ನು ಪಾಲಿಕೆ ತೆಗೆದುಕೊಳ್ಳಬೇಕು. ಎಲ್ಲರಿಗೂ ಕಾನೂನು ಹೇಳುವ ನೀವ್ಯಾಕೆ ಕಾನೂನು ಪಾಲಿಸಲಿಲ್ಲ. ಒಂದು ಅಮಾಯಕ ಜೀವ ಹೋಗಿದೆ ಎಂದು ಆಕ್ರೋಶ ಹೊರಹಾಕಿದರು.