ಬೆಳಗಾವಿ: ಮಹಾನಗರ ಪಾಲಿಕೆ ಎದುರು ಕನ್ನಡಪರ ಸಂಘಟನೆಗಳಿಂದ ಧ್ವಜಸ್ತಂಭ ಅಳವಡಿಕೆ ಸ್ಥಳಕ್ಕೆ ಭೇಟಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಮತ್ತೊಮ್ಮೆ ರಾಜಿ ಸಂಧಾನಕ್ಕೆ ಯತ್ನಿಸಿ ವಿಫಲರಾಗಿದ್ದಾರೆ.
ಇಂದು ಸಂಜೆ ತಮ್ಮ ಕಚೇರಿಯಿಂದ ಘಟನಾ ಸ್ಥಳಕ್ಕೆ ಆಗಮಿಸಿ ಕಾರ್ಯಕರ್ತರ ಮನವೊಲಿಕೆಗೆ ಪಾಲಿಕೆ ಆಯುಕ್ತರು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು. ಒಳಗಡೆ ಕುಳಿತುಕೊಂಡು ಚರ್ಚೆ ನಡೆಸೋಣ ಬನ್ನಿ ಎಂದು ಸಂಧಾನಕ್ಕೆ ಯತ್ನಿಸಿದರು. ಆದ್ರೆ ಪಾಲಿಕೆ ಆಯುಕ್ತರ ಮಾತಿಗೆ ಕ್ಯಾರೆ ಎನ್ನದ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಮಾತುಕತೆಗೆ ಆಗಮಿಸುವುದಿಲ್ಲ. ಯಾವುದೇ ಕಾರಣಕ್ಕೂ ಧ್ವಜಸ್ತಂಭ ತೆರವುಗಳಿಸಬೇಡಿ. ಕನ್ನಡ ಬಾವುಟ ಹೆಣ್ಣು ಮಕ್ಕಳ ಹಣೆ ಮೇಲಿರುವ ಕುಂಕುಮ ಇದ್ದ ಹಾಗೆ. ಬಾವುಟ ತೆರವುಗೊಳಿಸಿದ್ರೆ ಹೆಣ್ಣು ಮಕ್ಕಳ ಕುಂಕುಮ ಅಳಿಸಿದ ಹಾಗೆ ಆಗಲಿದೆ. ದಯವಿಟ್ಟು ತೆರವುಗೊಳಿಸಬೇಡಿ ಎಂದು ಆಯುಕ್ತರಿಗೆ ಕಾರ್ಯಕರ್ತರು ಮನವಿ ಮಾಡಿಕೊಂಡರು.
ಇದನ್ನೂ ಓದಿ: ಕುರಿಗಾಹಿಗಳ ಸಂಕಷ್ಟಕ್ಕೆ ಕರಗಿದ ಮನ: ಆರ್ಥಿಕ ನೆರವು ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್
ಈ ವೇಳೆ ಮಾರ್ಕೆಟ್ ವಿಭಾಗದ ಎಸಿಪಿ ಸದಾಶಿವ ಕಟ್ಟಿಮನಿ, ಖಡೇಬಜಾರ್ ಎಸಿಪಿ ಚಂದ್ರಪ್ಪ ಹಾಗೂ ಸಿಪಿಐಗಳ ಜೊತೆಗೂ ಆಯುಕ್ತರು ಚರ್ಚೆ ನಡೆಸಿದರು. ಇತ್ತ ಪಟ್ಟು ಬಿಡದ ಹೋರಾಟಗಾರರು ಅಹೋರಾತ್ರಿ ಧ್ವಜಸ್ತಂಭದ ಬಳಿ ಕುಳಿತುಕೊಳ್ಳಲು ನಿರ್ಧರಿಸಿದ್ದಾರೆ.