ಬೆಳಗಾವಿ : ಕೋವಿಡ್ ಹಿನ್ನೆಲೆ ರಾಜ್ಯ ಸರ್ಕಾರ ಎಸ್ಎಸ್‌ಎಲ್‌ಸಿ ಹಾಗೂ ಪಿಯು ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಪಾಸ್ ಮಾಡಿದೆ. ಪಾಸ್ ಆದ ಬಹುತೇಕ ವಿದ್ಯಾರ್ಥಿಗಳು ಪಿಯು ಹಾಗೂ ಡಿಗ್ರಿ ಕಾಲೇಜುಗಳ ಪ್ರವೇಶ ಪಡೆದಿದ್ದಾರೆ. ಪರಿಣಾಮ ಬೆಳಗಾವಿಯ ಪಿಯು, ಡಿಗ್ರಿ ತರಗತಿಗಳೆಲ್ಲವೂ ಭರ್ತಿಯಾಗಿವೆ. ಇದೀತ ತರಗತಿ ಆರಂಭಗೊಂಡು ನೂರಾರು ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಪಾಠ ಕೇಳುತ್ತಿರುವ ಪರಿಣಾಮ ಮಕ್ಕಳು ಹಾಗೂ ಪೋಷಕರಲ್ಲಿ ಕೊರೊನಾ ಭೀತಿ ಎದುರಾಗಿದೆ.
ಬೆಳಗಾವಿಯ ಸರ್ದಾರ್ ಸರ್ಕಾರಿ ಪಿಯು ಹಾಗೂ ಪದವಿ ಕಾಲೇಜಿನ ಒಂದೇ ಕೊಠಡಿಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಕೊರೊನಾ ರೂಲ್ಸ್ ಮರೆತು ನೂರಾರು ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತಿರುವುದು ಕಂಡು ಬರುತ್ತಿದೆ.
ಶಿಕ್ಷಣ ಇಲಾಖೆಯ ಬೇಜವಾಬ್ದಾರಿಗೆ ಇದೀಗ ಪೋಷಕರು ಕೂಡ ಆತಂಕಕ್ಕೀಡಾಗಿದ್ದಾರೆ. ನಗರದಲ್ಲಿರುವ ಸರ್ದಾರ್ ಪಿಯು ಕಾಲೇಜು, ವಡಗಾವಿಯಲ್ಲಿರುವ ಚಿಂತಾಮಣಿ ಹಾಗೂ ಜೈಲ್ ಕಾಲೇಜು ಸೇರಿ ಒಟ್ಟು 4 ಸರ್ಕಾರಿ ಕಾಲೇಜುಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗದ ಸ್ಥಿತಿ ಕಾಲೇಜಿನಲ್ಲಿ ನಿರ್ಮಾಣವಾಗಿದೆ.
ಮತ್ತೊಂದೆಡೆ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ವಾರಕ್ಕೆ 2 ದಿನ ಕ್ಲಾಸ್ ನಡೆಯುತ್ತಿದೆ. ಹೆಚ್ಚಿನ ಕೊಠಡಿ ಮತ್ತು ಡೆಸ್ಕ್‌ಗಳ ವ್ಯವಸ್ಥೆ ಮಾಡಿ ಕೊಟ್ಟು ವಾರಪೂರ್ತಿ ಕಾಲೇಜಿಗೆ ಬರುವ ವ್ಯವಸ್ಥೆ ಮಾಡಿಕೊಡಿ ಅಂತಾ ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕಾಲೇಜುಗಳಲ್ಲಿ ದುಪ್ಪಟ್ಟು ದಾಖಲಾತಿ
ಬೆಳಗಾವಿ ನಗರದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳು ಇರುವ ಕಾಲೇಜೆಂದರೆ ಅದು ಸರ್ದಾರ್ ಸರ್ಕಾರಿ ಪದವಿಪೂರ್ವ ಕಾಲೇಜು. ಈ ಕಾಲೇಜಿನಲ್ಲಿ ಪ್ರತಿವರ್ಷ 500ರಿಂದ 600 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಆದರೆ, ಈ ವರ್ಷ 1,100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ನಿತ್ಯವೂ ಸಾಕಷ್ಟು ವಿದ್ಯಾರ್ಥಿಗಳು ಪ್ರವೇಶ ಬಯಸಿ ಕಾಲೇಜಿಗೆ ಬರುತ್ತಿದ್ದಾರೆ.
ಸದ್ಯ ಇದೇ ಕಾಲೇಜಿನ ಒಂದೇ ಕೊಠಡಿಯಲ್ಲಿ 160ಕ್ಕೂ ಅಧಿಕ ವಿದ್ಯಾರ್ಥಿಗಳನ್ನ ಕೂರಿಸಿ ಪಾಠ ಮಾಡಬೇಕಾದ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಬ್ಯಾಚ್ಗಳ ಮಾದರಿಯಲ್ಲಿ ವಾರದಲ್ಲಿ 3 ಬಾರಿ ಒಂದೊಂದು ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಬ್ಯಾಚ್ ಮಾಡಿದ್ದರೂ ಕೂಡ ಒಂದೇ ಬ್ಯಾಚ್ನಲ್ಲಿ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುತ್ತಿರುವ ಹಿನ್ನೆಲೆ ಕುಳಿತುಕೊಳ್ಳಲು ಸಹ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಶಿಕ್ಷಣ ಇಲಾಖೆ ಮಾತ್ರ ಇತ್ತ ಕಡೆ ತಿರುಗಿಯೂ ನೋಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಕಾಲೇಜು ಪ್ರಾಚಾರ್ಯರು ಪ್ರತಿಕ್ರಿಯಿಸಿ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ. ಕಾಲೇಜಿಗೆ 300ಕ್ಕೂ ಅಧಿಕ ಡೆಸ್ಕ್‌ಗಳ ಅವಶ್ಯಕತೆ ಇದೆ. ಇತ್ತ ಪ್ರಾಧ್ಯಾಪಕರ ಕೊರತೆ ಇದ್ದು, ಅತಿಥಿ ಉಪನ್ಯಾಸಕರ ಸಹಾಯದಿಂದ ತರಗತಿ ನಡೆಸಲಾಗುತ್ತಿದೆ ಎಂದಿದ್ದಾರೆ.
ಎಚ್ಚೆತ್ತುಕೊಳ್ಳಬೇಕಿದೆ ಶಿಕ್ಷಣ ಇಲಾಖೆ
ಕೋವಿಡ್ ಕಾರಣಕ್ಕೆ ಶಿಕ್ಷಣ ಇಲಾಖೆ ಎಸ್ಎಸ್‌ಎಲ್‌ಸಿ ಹಾಗೂ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಕೈತೊಳೆದುಕೊಂಡಿದೆ. ವಿದ್ಯಾರ್ಥಿಗಳೆಲ್ಲರೂ ತೇರ್ಗಡೆಯಾದ ಹಿನ್ನೆಲೆ ಮುಂದಿನ ತರಗತಿಯ ದಾಖಲಾತಿಯಲ್ಲಿ ಹೆಚ್ಚಿಗೆಯಾಗಿದೆ. ಹೀಗಾಗಿ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸಹ ಜಾಗವಿಲ್ಲದ ಪರಿಸ್ಥಿತಿ ಇದ್ದು, ಕೊರೊನಾ ನಿಯಮಗಳ ಪಾಲನೆ ಅಸಾಧ್ಯದ ಮಾತಾಗಿದೆ. ಹೀಗಾಗಿ, ಶಿಕ್ಷಣ ಇಲಾಖೆ ಎಚ್ಚೆತ್ತು ಸೂಕ್ತ ವ್ಯವಸ್ಥೆ ಕಲ್ಪಿಸಿ ಪೋಷಕರ ಆತಂಕ ದೂರ ಮಾಡಬೇಕಿದೆ.
ನಿರೀಕ್ಷೆಗೂ ಮೀರಿ ಪ್ರವೇಶ ಇರುವ ಕಾರಣ ಇದೀಗ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೂರಲು ವ್ಯವಸ್ಥೆ ಇಲ್ಲ, ಪಾಠ ಕೇಳುವ ಪರಿಸ್ಥಿತಿಯೂ ಇಲ್ಲ. ವಿದ್ಯಾರ್ಥಿಗಳು ಹೆಚ್ಚಾಗಿದ್ದಕ್ಕೆ ವಾರದಲ್ಲಿ ಮೂರು ಬಾರಿ ಪಾಠ ಕೇಳುವ ಸ್ಥಿತಿ ಇದೆ. ಕೊರೊನಾ ಭೀತಿ ನಡುವೆಯೂ ಸಾಮಾಜಿಕ ಅಂತರ ಮರೆತು ಮಕ್ಕಳು ಪಾಠ ಕೇಳುವಂತಾಗಿದೆ. ಇನ್ನಾದರೂ ಶಿಕ್ಷಣ ಇಲಾಖೆ ಎಚ್ಚೆತ್ತು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: VIDEO: ಕಾಡುಕೋಣ ಸೆರೆಹಿಡಿಯುವಲ್ಲಿ ಬೆಳಗಾವಿ ಮಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿ