ಬೆಳಗಾವಿ: ಪಂಚಮಸಾಲಿ ಮೀಸಲಾತಿ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ನಾಳೆ ಐತಿಹಾಸಿಕ ಘೋಷಣೆ ಮಾಡಲಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ನಾಳೆ ಪಂಚಮಸಾಲಿ ಸಮುದಾಯದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಕುರಿತು ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸರ್ಕಾರದ ಮೇಲೆ ವಿಶ್ವಾಸ ಇದೆ. ನಾಳೆ ಪಂಚಮಸಾಲಿ ಮೀಸಲಾತಿ ಪ್ರಕಟಣೆ ಆಗಲಿದೆ. ಗುರುವಾರ ಈ ನಿಟ್ಟಿನಲ್ಲಿ ಐತಿಹಾಸಿಕ ಘೋಷಣೆ ಆಗಲಿದೆ. ಅಷ್ಟೇ ಅಲ್ಲದೆ ಬೆಳಗಾವಿಯಲ್ಲಿ ಸ್ವಯಂಪ್ರೇರಿತವಾಗಿ ಜನ ಬಂದು ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದರು.
ನಾಳೆ ಶಕ್ತಿಪ್ರದರ್ಶನ ಆಗವುದರಿಂದ, ಬೊಮ್ಮಾಯಿ ಐತಿಹಾಸಿಕ ನಿರ್ಧಾರ ಮಾಡಲಿದ್ದಾರೆ. ನಾವು ಯಾರಿಗೂ ಆಹ್ವಾನ ನೀಡುತ್ತಿಲ್ಲ, 25 ಲಕ್ಷ ಜನ ಬರುತ್ತಾರೆ. ನಿರಾಣಿ ಬಂದರೆ ಅವರನ್ನು ವೇದಿಕೆ ಮೇಲೆ ಕರೆಯುವುದಿಲ್ಲ. ಅವರಿಗೆ ಕೆಳಗೆ ಕುರ್ಚಿ ಹಾಕುತ್ತೇವೆ. ಇನ್ನು ಮೀಸಲಾತಿ ಶ್ರೇಯ ಯಾರಿಗೆ ಲಭಿಸಬೇಕು ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಯಾರೊಬ್ಬರಿಗೂ ಸೀಮಿತವಲ್ಲ, ಸಮುದಾಯದ ಕಟ್ಟಡೆಯ ವ್ಯಕ್ತಿಗೆ ಸೇರುತ್ತದೆ ಎಂದು ತಿಳಿಸಿದರು.
ಎಲ್ಲಾ ಒಳ್ಳೆಯದಾಗಲಿದೆ: ಇದೇ ವೇಳೆ ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್, ಜಯಮೃತ್ಯುಂಜಯ ಸ್ವಾಮೀಜಿ ಫೋನ್ ಮಾಡಿ, ಸಿಹಿ ಸುದ್ದಿ ಸಿಗುತ್ತಾ ಎಂದು ಕೇಳಿದರು. ಮುಖ್ಯಮಂತ್ರಿಯನ್ನು ಕೇಳಬೇಕು ಎಂದು ನಾನು ಹೇಳಿದ್ದೇನೆ. ಹೋಪ್ ಫಾರ್ ದ ಬೆಸ್ಟ್ ಎಂದಿದ್ದೇನೆ. ಇನ್ನು ಸುವರ್ಣಸೌಧದಲ್ಲಿ ನಾಳೆ ಸಮುದಾಯದವರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಕುರಿತು ಮಾತನಾಡಿದ ಅವರು, ಇದು ಶಕ್ತಿ ಪ್ರದರ್ಶನ ಅಂತಲ್ಲ, 2ಎ ಮೀಸಲಾತಿಗಾಗಿ ಹಕ್ಕೊತ್ತಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: '2ಎ ಮೀಸಲಾತಿ ನೀಡಿದ್ರೆ ವಿಜಯೋತ್ಸವ, ಇಲ್ಲದಿದ್ದರೆ ಡಿ.22ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ'