ಬೆಳಗಾವಿ: ಸ್ಥಳದಲ್ಲಿದ್ದ ರೈತರ ಮನವಿ ಸ್ವೀಕರಿಸದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಮಾನ ನಿಲ್ದಾಣದ ಒಳಗಡೆ ಹೋದ ಪ್ರಸಂಗ ಬೆಳಗಾವಿಯಲ್ಲಿ ಕಂಡು ಬಂತು.
ಇನ್ನು ಸಿಎಂ ವರ್ತನೆ ಖಂಡಿಸಿ ಯಡಿಯೂರಪ್ಪ ಎದುರೇ ರೈತರು ಧಿಕ್ಕಾರ ಕೂಗಿದರು. ಬಹು ದಿನಗಳ ಬಳಿಕ ಸಿಎಂ ಬೆಳಗಾವಿಗೆ ಆಗಮಿಸಿದ್ದರು. ಹೀಗಾಗಿ ಜಿಲ್ಲೆಯ ವಿವಿಧ ಸಂಘಟನೆ ಮುಖಂಡರು ಸಿಎಂಗೆ ಮನವಿ ಸಲ್ಲಿಸಲು ಬಂದಿದ್ದರು. ತಲಾ ಒಂದು ಸಂಘಟನೆಯಿಂದ ಇಬ್ಬರಿಗೆ ಮಾತ್ರ ಪೊಲೀಸರು ಅನುಮತಿ ನೀಡಿದ್ದರು. ಎರಡು ಸಂಘಟನೆ ಮುಖಂಡರಿಂದ ಮಾತ್ರ ಮನವಿ ಸ್ವೀಕರಿಸಿದ ಸಿಎಂ ರೈತ ಮುಖಂಡರನ್ನು ಕಡೆಗಣಿಸಿ ತಕ್ಷಣವೇ ವಿಮಾನ ನಿಲ್ದಾಣದೊಳಗೆ ತೆರಳಿದರು.
ಇದರಿಂದ ಕುಪಿತಗೊಂಡ ರೈತರು ಯಡಿಯೂರಪ್ಪ ಎದುರೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರು ಬೊಬ್ಬೆ ಹೊಡೆದು ವಿಮಾನ ನಿಲ್ದಾಣ ಆವರಣದಲ್ಲಿ ಪ್ರತಿಭಟನೆ ಮುಂದುವರೆಸಿದರು.
ಸಚಿವರಿಗೆ ಗೇರಾವ್!
ಸಿಎಂ ಸಭೆ ಮುಗಿದ ಬಳಿಕ ತೆರಳುತ್ತಿದ್ದ ಸಚಿವರಾದ ಜಗದೀಶ್ ಶೆಟ್ಟರ್, ಶ್ರೀಮಂತ ಪಾಟೀಲ, ಶಾಸಕ ಮಹಾದೇವಪ್ಪ ಯಾದಾವಾಡ ಕಾರಿಗೂ ರೈತರು ಮುತ್ತಿಗೆ ಹಾಕಲು ಯತ್ನಿಸಿದರು. ರೈತರನ್ನು ಕಂಡು ಕೆಳಗಿಳಿದು ಮನವಿ ಸ್ವೀಕರಿಸಬೇಕಿದ್ದ ಸಚಿವರು, ಯೂಟರ್ನ್ ಹೊಡೆದು ಬೇರೆ ರಸ್ತೆ ಮೂಲಕ ತೆರಳಿದರು.
ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ರೈತರನ್ನು ಭೇಟಿ ಮಾಡಿ ಮನವೊಲಿಸಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.