ಚಿಕ್ಕೋಡಿ : ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಅಂತಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶ್ರೀಮಂತ ಪಾಟೀಲ್ ನನಗೆ ಬೆಂಬಲವಾಗಿ ನಿಂತಿದ್ದಾರೆ. ಇದು ಶ್ರೀಮಂತ ಪಾಟೀಲ್ ಅವರ ಚುನಾವಣೆ ಅಲ್ಲ. ಇದು ಯಡಿಯೂರಪ್ಪನವರ ಚುನಾವಣೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ‌್ ಪರ ಅನಂತಪುರದಲ್ಲಿ ಪ್ರಚಾರ ಭಾಷಣ ಮಾಡಿದ ಸಿಎಂ ಬಿಎಸ್ವೈ, ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯದ ಅಭಿವೃದ್ಧಿ ಮರೆತು ಬಿಟ್ಟಿದ್ದರು. ಹೋಟೆಲ್‌ನಲ್ಲಿ ಆಡಳಿತ ನಡೆಸಿದ್ದರು. ಆದರೆ ಶಾಸಕರ ಕ್ಷೇತ್ರದ ಸಮಸ್ಯೆಗೆ ಸ್ಪಂದನೆ ನೀಡಿಲ್ಲ ಎಂದು ಕಿಡಿ ಕಾರಿದರು.
ನಿಮ್ಮ ಯೋಗ್ಯತೆಗೆ ಅಧಿಕಾರ ಕೊಟ್ಟಾಗ ಸರಿಯಾಗಿ ನಡೆಸಿಕೊಳ್ಳಲು ಆಗಲಿಲ್ಲ. ಬರುವ ಮೂರುವರೆ ವರ್ಷದಲ್ಲಿ ಪ್ರತಿ ಬಡವರಿಗೆ ಮನೆ ಆಗಬೇಕು. ಸೂರು ಸಿಗಬೇಕು. ಈ ಕ್ಷೇತ್ರದ ಬೇಡಿಕೆ ಬಸವೇಶ್ವರ ಏತ ನೀರಾವರಿ, ಕೆರೆ ತುಂಬಿಸುವ ಸೇರಿದಂತೆ ಹಲವು ಬೇಡಿಕೆ ಇಟ್ಟಿದ್ದೀರಿ. ಎಲ್ಲವನ್ನೂ ಈಡೇರಿಸುತ್ತೇನೆ ಎಂದರು.
ನಿಮ್ಮ ಯಡಿಯೂರಪ್ಪ ನಂಬಿಕೆ ದ್ರೋಹ ಮಾಡಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ. ಆ ನಂಬಿಕೆಗೆ ಧಕ್ಕೆ ಬರಲ್ಲ. ನೀರಾವರಿ ಸೇರಿದಂತೆ ರೈತರ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುತ್ತದೆ. ಬರುವ ಫೆಬ್ರವರಿ ಬಜೆಟ್ನಲ್ಲಿ ಅನೇಕ ಯೋಜನೆಯನ್ನು ಘೋಷಣೆ ಮಾಡ್ತೀನಿ ಎಂದು ಭರವಸೆ ನೀಡಿದರು.