ಬೆಳಗಾವಿ: ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಆಸೆ ಪಟ್ಟಿಲ್ಲ. ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ನನಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗೋದಿಲ್ಲ ಎಂಬ ಪೂರ್ಣ ಭರವಸೆ ನನಗಿದೆ. ಪಕ್ಷದ ಮುಖಂಡರು ಯಾವ ಜವಾಬ್ದಾರಿ ಕೊಡುತ್ತಾರೋ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನನಗೆ ಸಚಿವ ಸ್ಥಾನ ಕೊಡದಿರುವುದಕ್ಕೆ ಬೇಜಾರಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಮತ್ತೊಂದು ದೊಡ್ಡ ಜವಾಬ್ದಾರಿ ಕೊಡಬಹುದು. ಈಗಾಗಲೇ ಸಿಎಂ ಅವರನ್ನು ಭೇಟಿಯಾಗಿ ನನಗೂ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇವೆ. ಸಿಎಂ ಏನು ಕೊಡುತ್ತಾರೋ ಅದನ್ನು ನಿಭಾಯಿಸುತ್ತೇನೆ ಎಂದರು.
ಬೇರೆ ಜವಾಬ್ದಾರಿ ಕೊಡುವ ಸಲುವಾಗಿ ಸಂಪುಟದಿಂದ ನನ್ನನ್ನು ಕೈಬಿಟ್ಟಿರಬಹದು. ಮರಾಠಾ ಸಮುದಾಯದವರು ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೇಜಾರು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮುಂದೊಂದು ದಿನ ನಮ್ಮ ಸಮುದಾಯಕ್ಕೆ ಒಳ್ಳೆಯ ಸ್ಥಾನಮಾನ ಕೊಡುವ ವಿಶ್ವಾಸವಿದೆ ಎಂದರು.
ಪಕ್ಷದ ಮುಖಂಡರು ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಸಚಿವ ಸ್ಥಾನ ನಿಭಾಯಿಸಿದ ನನಗೆ ನಿಗಮದ ಮಂಡಳಿ ಸ್ಥಾನ ಬೇಡವೇ ಬೇಡ. ಇನ್ನೂ ಸಾಕಷ್ಟು ಸಮಯ ಇದೆ. ಪಕ್ಷದ ವರಿಷ್ಠರು ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ ಎಂದರು.