ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ 3,542.10 ಕೋಟಿ ರೂ.ಗಳ ಪೂರಕ ಅಂದಾಜುಗಳ (ಮೊದಲ ಕಂತು) ಪ್ರಸ್ತಾವನೆಯನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದರು. ರಾಜ್ಯ ಸರ್ಕಾರ ಜುಲೈನಲ್ಲಿ ಬಜೆಟ್ ಮಂಡಿಸಿದ ಬಳಿಕ 29 ಇಲಾಖೆಗಳಿಗೆ ಸಂಬಂಧಿಸಿದಂತೆ ಮಾಡಿರುವ ಹೆಚ್ಚುವರಿ ವೆಚ್ಚಗಳಿಗೆ ಸಂಬಂಧಿಸಿದಂತೆ ಪೂರಕ ಅಂದಾಜು ಇದಾಗಿದೆ.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಕಚೇರಿಗೆ ಹೆಚ್ಚುವರಿಯಾಗಿ ವೆಚ್ಚ ಮಾಡಿರುವ ರೂ. 2.71 ಕೋಟಿ, 33 ಮಂದಿ ನೂತನ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ, ಶಾಸಕರು, ಸರ್ಕಾರದ ವಿಶೇಷ ಪ್ರತಿನಿಧಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಿಗೆ 7.44 ಕೋಟಿ ರೂ. ವೆಚ್ಚದಲ್ಲಿ 38 ಹೊಸ ಕಾರು, ವಿಧಾನಸಭೆ ಸದಸ್ಯರಿಗೆ 4 ಕೋಟಿ ರೂ. ವೆಚ್ಚದಲ್ಲಿ ಹೊಸ ಕಾರು, ಇನ್ವೆಸ್ಟ್ ಕರ್ನಾಟಕ ಫೋರಂ ಸಿಇಒಗೆ 20 ಲಕ್ಷ ರೂ. ಸೇರಿ 11.64 ಕೋಟಿ ರೂ. ವೆಚ್ಚ ಮಾಡಿರುವುದಕ್ಕೆ ಅನುಮೋದನೆ ಕೋರಿ ಪೂರಕ ಅಂದಾಜು ಮಂಡನೆ ಮಾಡಲಾಗಿದೆ.
ಉಳಿದಂತೆ ಹಿಮಾಚಲ ಪ್ರದೇಶದಲ್ಲಿ ಅತಿವೃಷ್ಠಿ ಸಂಭವಿಸಿದ್ದರಿಂದ ರಾಜ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಿಮಾಚಲ ಮುಖ್ಯಮಂತ್ರಿಗಳಿಗೆ ನೀಡಿದ್ದ 15 ಕೋಟಿ ರೂ, 2022-23ನೇ ಹಾಗೂ 2023-24ನೇ ಸಾಲಿನ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪಾವತಿಸಿದ್ದ 7.30 ಕೋಟಿ ರೂ ಪರಿಹಾರ, ಮುಖ್ಯಮಂತ್ರಿಗಳ ನಿಯೋಗವು ದಾವೋಸ್‌ನಲ್ಲಿ ನಡೆಯಲಿರುವ ವರ್ಲ್ಡ್ ಎಕೋನಾಮಿಕ್ ಫೋರಂನಲ್ಲಿ ಭಾಗವಹಿಸಲು 12 ಕೋಟಿ ರೂ ಹಾಗೂ ಬೃಹತ್ ಕೈಗಾರಿಕೆ ಸಚಿವರ ನೇತೃತ್ವದ ನಿಯೋಗ ಅಮೆರಿಕಕ್ಕೆ ಭೇಟಿ ನೀಡಲು 2.25 ಕೋಟಿ ರೂ. ಸೇರಿ 14.25 ಕೋಟಿ ರೂಪಾಯಿ ವೆಚ್ಚ ಮಾಡಿರುವುದನ್ನು ಕ್ರಮಬದ್ಧಗೊಳಿಸಲಾಗಿದೆ.
ಇನ್ನು, ಪ್ರಮುಖವಾಗಿ ಕಂದಾಯ ಇಲಾಖೆಗೆ 584 ಕೋಟಿ, ಸಹಕಾರ ಇಲಾಖೆಗೆ 259 ಕೋಟಿ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 343 ಕೋಟಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 610 ಕೋಟಿ , ಸಮಾಜ ಕಲ್ಯಾಣ ಇಲಾಖೆಗೆ 470 ಕೋಟಿ, ಲೋಕೋಪಯೋಗಿ ಇಲಾಖೆಗೆ 150 ಕೋಟಿ , ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿಗೆ 127 ಕೋಟಿ ರೂಪಾಯಿ ಸೇರಿದಂತೆ ಒಟ್ಟು 3,542.10 ಕೋಟಿ ರು.ಗಳನ್ನು ಸರ್ಕಾರಕ್ಕೆ ಮಂಜೂರು ಮಾಡುವಂತೆ ಪೂರಕ ಅಂದಾಜು ಪ್ರಸ್ತಾವನೆ ಮಂಡಿಸಲಾಯಿತು.
ಇದನ್ನೂ ಓದಿ : ಬಿಜೆಪಿ ಸದಸ್ಯರ ಧರಣಿ ನಡುವೆಯೇ 5 ವಿಧೇಯಕಗಳಿಗೆ ಅಂಗೀಕಾರ ನೀಡಿದ ವಿಧಾನಸಭೆ