ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಂದೇ ವಿಮಾನದಲ್ಲಿ ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉಭಯ ನಾಯಕರು ಬೆಳಗಾವಿಗೆ ಬರಲಿದ್ದಾರೆ. ಮಧ್ಯಾಹ್ನ 1.10ಕ್ಕೆ ಹೊರಡಲಿರುವ ವಿಮಾನ ಮಧ್ಯಾಹ್ನ 3ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಸ್ತೆ ಮಾರ್ಗವಾಗಿ ಹಾವೇರಿ ಜಿಲ್ಲೆಯ ಶಿಗ್ಗಾಂವ್ಗೆ ಪ್ರವಾಸ ಬೆಳೆಸಲಿದ್ದಾರೆ. ಶಿಗ್ಗಾಂವ್ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ದೊಡ್ಡಕೆರೆಗೆ ಸಿಎಂ ಬಾಗಿನ ಅರ್ಪಿಸಲಿದ್ದಾರೆ. ನಂತರ ಹಾವೇರಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ.
ಹೀಗಿದೆ ಡಿಕೆಶಿ ಪ್ರವಾಸ: ಬೆಳಗಾವಿಯ ಕಾಂಗ್ರೆಸ್ ಭವನಕ್ಕೆ ಆಗಮಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಬೆಳಗಾವಿ ನಗರ, ಗ್ರಾಮೀಣ ಮತ್ತು ಚಿಕ್ಕೋಡಿ ವಿಭಾಗದ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಜಿಲ್ಲಾ ಮುಖಂಡರ ಜತೆಗೆ ಪಕ್ಷ ಸಂಘಟನೆ ಸಂಬಂಧ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ: ಮದುವೆ ಆರತಕ್ಷತೆ ವೇಳೆ ಕುಸಿದ ಬಿದ್ದ ವಧುವಿನ ಬ್ರೈನ್ ಡೆಡ್... ನೊಂದ ಆರೋಗ್ಯ ಸಚಿವರಿಂದ ಟ್ವೀಟ್!