ಬೆಳಗಾವಿ : ಶಕ್ತಿ ಯೋಜನೆ ಪರಿಣಾಮ ನಿರ್ವಾಹಕ ಮತ್ತು ಮಹಿಳಾ ಪ್ರಯಾಣಿಕರ ನಡುವೆ ಜಟಾಪಟಿ ನಡೆದಿರುವ ಘಟನೆ ಜಿಲ್ಲೆಯ ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ಮಧ್ಯಾಹ್ನ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹಲವು ಮಹಿಳಾ ಪ್ರಯಾಣಿಕರು ಬಂದಿದ್ದರು. ಈ ವೇಳೆ ಬಸ್ ನಿರ್ವಾಹಕ ಮಹಿಳೆಯರಿಗೆ ಬೇಗನೇ ಬಸ್ ಹತ್ತುವಂತೆ ತಿಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಕೆಲ ಮಹಿಳೆಯರು ನಿರ್ವಾಹಕನ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ ವಾಗ್ವಾದ ತಾರಕಕ್ಕೇರಿದ್ದು, ಇಬ್ಬರೂ ಕೈ ಕೈ ಮಿಲಾಯಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸವದತ್ತಿ ಡಿಪೋಗೆ ಸೇರಿದ ಕೆಎ 22 ಎಫ್ 1863 ಸಂಖ್ಯೆಯ ಕೆಎಸ್ಆರ್ ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸ್ ನಿರ್ವಾಹಕ ಬಿ.ಎಸ್. ಭದ್ರಣ್ಣವರ, ಬಸ್ ಹತ್ತುವ ವೇಳೆ ಮಹಿಳಾ ಪ್ರಯಾಣಿಕರಿಗೆ ಬೇಗನೇ ಹತ್ತಿ ಎಂದು ನಾನು ಹೇಳಿದೆ. ಈ ವೇಳೆ ಮಹಿಳೆಯರ ಜೊತೆಗೆ ಬಂದಿದ್ದ ವ್ಯಕ್ತಿಯೊಬ್ಬ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹೀಗಾಗಿ ನಾನು ಕೂಡ ಆತನಿಗೆ ಉಲ್ಟಾ ಮಾತನಾಡಬೇಕಾಯಿತು. ಬಳಿಕ ಆತ ತನ್ನ ಜೊತೆಗೆ ಬಂದಿದ್ದ ಏಳೆಂಟು ಮಹಿಳೆಯರಿಗೆ ನನ್ನನ್ನು ಹೊಡೆಯುವಂತೆ ತಿಳಿಸಿದ್ದಾನೆ. ಆಗ ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಮಹಿಳೆಯರು ಕೈ ತಿರುವಿ, ಕೆಳಗೆ ಬೀಳಿಸಿ ಒದ್ದಿದ್ದಾರೆ. ಇದರಿಂದ ನನ್ನ ಕೈ, ಎದೆ ಹಾಗೂ ಕಾಲಿಗೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ. ಈ ಮಹಿಳೆಯರು ವಿಜಯಪುರದಿಂದ ಯಲ್ಲಮ್ಮ ಗುಡ್ಡಕ್ಕೆ ಬಂದಿದ್ದರು ಎಂದು ತಿಳಿಸಿದರು. ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಸ್ ನಿರ್ವಾಹಕಿ ಮತ್ತು ವೃದ್ಧೆ ನಡುವೆ ಗಲಾಟೆ : ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ತಂದ ಮೇಲೆ ಒಂದಿಲ್ಲೊಂದು ಅವಾಂತರಗಳು ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಬಸ್‌ನಲ್ಲಿ ಸೀಟ್ಗಾಗಿ ಮಹಿಳೆಯರು ಕಿತ್ತಾಡಿಕೊಂಡಿದ್ದ ಘಟನೆ ನಡೆದಿತ್ತು. ಇಂತದೇ ಘಟನೆ ನಿನ್ನೆ (ಶುಕ್ರವಾರ) ಕುಂದಗೋಳ ಹುಬ್ಬಳ್ಳಿ ಬಸ್‌ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕಿ ಹಾಗೂ ವೃದ್ಧೆಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಕೋಪಗೊಂಡ ನಿರ್ವಾಹಕಿ ಬಸ್ನಲ್ಲೇ ವೃದ್ಧೆಗೆ ಕಪಾಳಮೋಕ್ಷ ಮಾಡಿದ್ದರು.
ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿ ನಡೆದಿತ್ತು. ಬೆಳಗ್ಗೆ ಕುಂದಗೋಳದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಮಾರ್ಗ ಮಧ್ಯೆ ಶೆರೆವಾಡ ಗ್ರಾಮದ ಬಳಿ ನಿರ್ವಾಹಕಿ ಹಾಗೂ ವೃದ್ಧ ಮಹಿಳೆ ನಡುವೆ ಟಿಕೆಟ್ ಹಾಗೂ ಸೀಟು ವಿಚಾರವಾಗಿ ಗಲಾಟೆ ಆರಂಭವಾಗಿತ್ತು. ಈ ಇಬ್ಬರ ಜಗಳ ಅತಿರೇಕಕ್ಕೆ ಹೋಗಿದ್ದು ವೃದ್ಧೆ ನಿರ್ವಾಹಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಕೋಪಗೊಂಡ ನಿರ್ವಾಹಕಿ ವೃದ್ಧೆಗೆ ಕಪಾಳಮೋಕ್ಷ ಮಾಡಿದ್ರು. ಸಹ ಪ್ರಯಾಣಿಕರು ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ : ಸರ್ಕಾರಿ ಬಸ್‌ನಲ್ಲಿ ಸೀಟ್ಗಾಗಿ ನಾರಿಯರ ಕಿತ್ತಾಟ: ವೈರಲ್ ವಿಡಿಯೋ