ಚಿಕ್ಕೋಡಿ : ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆರಾಧ್ಯ ದೇವಿ ಚಿಂಚಲಿ ಮಾಯಕ್ಕ ದೇವಿ ಜಾತ್ರೆ ರದ್ದಾಗಿರುವುದು ಭಕ್ತರಿಗೆ ಮತ್ತು ವ್ಯಾಪಾರಸ್ಥರಿಗೆ ನಿರಾಶೆ ಮೂಡಿಸಿದೆ.
ಸುಮಾರು ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗುತ್ತಿದ್ದರು. ಈ ವೇಳೆ ಬೀದಿ ಬದಿ ವ್ಯಾಪಾರಿಗಳು ಉತ್ತಮ ಆದಾಯ ಗಳಿಸುತ್ತಿದ್ದರು. ಈ ಜಾತ್ರೆಗೆ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಪ್ರತಿ ವರ್ಷ ಸೇರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಜಾತ್ರೆ ರದ್ದಾಗಿದ್ದು, ವ್ಯಾಪಾರಸ್ಥರ ಸಂಕಷ್ಟಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿಯಿಂದಾಗಿ ಚಿಂಚಲಿ ಮಾಯಕ್ಕದೇವಿ ಜಾತ್ರೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ ಪರಿಣಾಮ ಇಲ್ಲಿನ ನೂರಾರು ಸಣ್ಣ ಪುಟ್ಟ ವ್ಯಾಪಾರಿಗಳ ಬಾಳು ಬೀದಿಗೆ ಬಂದಿದೆ. ಜಾತ್ರೆಗೆ ಅನುಮತಿ ನೀಡಿ ಇಲ್ಲವೇ ನಮಗೆ ಪರಿಹಾರವಾದರೂ ನೀಡಿ ಎಂದು ಸ್ಥಳೀಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ.