ಬೆಳಗಾವಿ: ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ತಾಯಿ ಅಂತ್ಯಕ್ರಿಯೆಗೆ ದುಡ್ಡಿಲ್ಲದ ಪರಿಣಾಮ ತಾಯಿಯ ಅಂತ್ಯಕ್ರಿಯೆಗಾಗಿ ಮಕ್ಕಳು ಮೂರು ದಿನ ಕಾದು ಕುಳಿತ ಮನಕಲಕುವ ಘಟನೆ ಕುಂದಾನಗರಿಯಲ್ಲಿ ಬೆಳಕಿಗೆ ಬಂದಿದೆ.
ಕಳೆದ ಮೂರು ದಿನಗಳ ಹಿಂದೆ (ಅ.16) ತಾಲೂಕಿನ ಗಣೇಶಪುರ ಗ್ರಾಮದ ನಿವಾಸಿ ಭಾರತಿ ಬಸ್ತವಾಡಕರ್ (50) ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಮೃತ ಭಾರತಿ ಅವರ ಇಬ್ಬರು ಗಂಡು ಮಕ್ಕಳು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಕೊರೊನಾ ವೈರಸ್ ತಡೆಗೆ ಸರ್ಕಾರ ಕೈಗೊಂಡ ಲಾಕ್ಡೌನ್ನಿಂದಾಗಿ ಮಕ್ಕಳಿಬ್ಬರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದರು. ಹೀಗಾಗಿ ಇಬ್ಬರ ಕೈಯಲ್ಲಿ ತಾಯಿಯ ಅಂತ್ಯಕ್ರಿಯೆ ಮಾಡಿಸಲು ಹಣವಿರಲಿಲ್ಲ. ಹೀಗಾಗಿ ಮೂರು ದಿನ ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲೇ ತಾಯಿಯ ಮೃತದೇಹ ಇಟ್ಟುಕೊಂಡು ಕುಳಿತಿದ್ದರು.
ಮೃತ ತಾಯಿಯ ಅಂತ್ಯಕ್ರಿಯೆಗೂ ದುಡ್ಡು ಇಲ್ಲದೆ ಪರದಾಡುತ್ತಿದ್ದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಹೆಲ್ಪ್ ಫಾರ್ ನೀಡೀ ಸಂಸ್ಥೆ ಸದಸ್ಯರು, ಭಾರತಿ ಅವರ ಅಂತ್ಯಕ್ರಿಯೆಯನ್ನು ಸದಾಶಿವನಗರದಲ್ಲಿ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.