ಬೆಳಗಾವಿ: ಕೊರೊನಾಗೆ ಬಲಿಯಾದ ಬಾಲ್ಯ ಸ್ನೇಹಿತನ ಶವ ಗೋಕಾಕಿಗೆ ಬರುತ್ತಿದ್ದಂತೆ ಆತನನ್ನು ನೆನೆದು ಸಚಿವ ರಮೇಶ್ ಜಾರಕಿಹೊಳಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆಯಿತು.
ಗೋಕಾಕ್ ನಗರದ ಬಸವೇಶ್ವರ ವೃತ್ತಕ್ಕೆ ಆಪ್ತ ಗೆಳೆಯ ಎಸ್.ಎ.ಕೋತ್ವಾಲ್ ಅವರ ಶವ ಬರುತ್ತಿದ್ದಂತೆ ರಮೇಶ್ ಜಾರಕಿಹೊಳಿ ಕಣ್ಣೀರಿಟ್ಟರು. ಈ ವೇಳೆ ಸಚಿವರನ್ನು ಅಶೋಕ ಪೂಜಾರಿ ಸಮಾಧಾನಪಡಿಸಿದರು. ಕೋತ್ವಾಲ್ ಅವರು ಸಚಿವ ರಮೇಶ್ ಹಾಗೂ ಜೆಡಿಎಸ್ ಮುಖಂಡ ಅಶೋಕ ಪೂಜಾರಿಯ ಸ್ನೇಹಿತರಾಗಿದ್ದರು. ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಉಭಯ ನಾಯಕರೂ ಪಾಲ್ಗೊಂಡಿದ್ದರು.
ಬಹುಅಂಗಾಂಗ ಕಾಯಿಲೆಗಳಿಂದ ಬಳಲುತ್ತಿದ್ದ ಕೋತ್ವಾಲ್ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಕೋತ್ವಾಲ್ ಇಂದು ನಿಧನರಾಗಿದ್ದಾರೆ. ಇವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.