ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಗ್ರಾಮಪಂಚಾಯಿತಿ ಸದಸ್ಯತ್ವವನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿ, ಸದಸ್ಯತ್ವ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕಳೆದ ತಿಂಗಳು ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆದಿತ್ತು. ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ವಾರ್ಡ್ ನಂಬರ್ 3 ಲ್ಲಿ ಮಹಿಳಾ ಸ್ಥಾನಕ್ಕೆ ಯಮನವ್ವ ಹಣಮಂತ ಹೊಸಸಾಲಿ ಎಂಬ ಮಹಿಳೆಯು ನಾಮಪತ್ರ ಸಲ್ಲಿಸಿದ್ದರು. ಇವರ ನಾಮಪತ್ರವನ್ನು ತಾಲೂಕು ಚುನಾವಣಾ ಅಧಿಕಾರಿಗಳು ಜಾತಿಯ ಪ್ರಮಾಣಪತ್ರ ಸಲ್ಲಿಸಿಲ್ಲವೆಂದು ಸುಳ್ಳು ಆರೋಪ ಮಾಡಿ ತಿರಸ್ಕರಿಸಿದ್ದರು. ಬಳಿಕ ಅಸಾಂವಿಧಾನಿಕವಾಗಿ ಅವಿರೋಧವಾಗಿ ಸದಸ್ಯತ್ವ ಆಯ್ಕೆಗೆ ಅವಕಾಶ ಕೊಟ್ಟು ತಮ್ಮ ದರ್ಪ ತೋರಿದ್ದಾರೆ ಎಂದು ಪ್ರತಿಭಟನೆ ನಡೆಸಿದ ಗ್ರಾಮಸ್ಥರ ಆರೋಪವಾಗಿದೆ.
ಓದಿ:ಗ್ರಾ.ಪಂ ಚುನಾವಣೆ ಮುಗಿದರೂ ನಿಲ್ಲದ ಬೀದಿ ಜಗಳ: ಗೆದ್ದ, ಸೋತ ಅಭ್ಯರ್ಥಿಗಳ ಕುಟುಂಬಸ್ಥರ ಮಧ್ಯೆ ಮಾರಾಮಾರಿ
ಕಳೆದ ನಾಲ್ಕು ದಿನಗಳಿಂದ ಪಂಚಾಯಿತಿ ಮುಂಭಾಗದಲ್ಲಿ, ಚುನಾವಣೆ ನಡೆಸದೆ ಅಸಾಂವಿಧಾನಿಕವಾಗಿ ಅವಿರೋಧವಾಗಿ ಆಯ್ಕೆ ಮಾಡಲಾದ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ವಾರ್ಡಿನಲ್ಲಿ ಮರುಚುನಾವಣೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನೂರಾರು ಸಾಮಾಜಿಕ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.