ಚಿಕ್ಕೋಡಿ: ಮಹಾರಾಷ್ಟ್ರ ಗಡಿಯಲ್ಲಿರುವ ಚಿಕ್ಕೋಡಿ ತಾಲೂಕಿನಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಚಿಕ್ಕೋಡಿ ಸಾರ್ವಜನಿಕರು ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಿದ್ದು, ರಸಗೊಬ್ಬರ ಹಾಗೂ ಕೀಟನಾಶಕಗಳ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಹೀಗಾಗಿ ಚಿಕ್ಕೋಡಿ ಭಾಗದ ರೈತರು ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕೋಡಿ ಭಾಗದಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ವ್ಯಕ್ತವಾಗಿದೆ. ಆದರೆ ಗೋವಿನಜೋಳ, ಕಬ್ಬು ಸೇರಿದಂತೆ ಇತರೆ ಕೆಲ ಬೆಳೆಗಳಲ್ಲಿ ಕೀಟಗಳು ಆಗುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಈ ಕೀಟಬಾಧೆ ತಡೆಯಲು ಔಷಧಿ ಸಂಪಡಣೆ ಮಾಡಬೇಕೆಂದರೆ ಕೀಟನಾಶಕಗಳ ಅಂಗಡಿಗಳು ಬಂದ್ ಆಗಿದೆ. ಹೀಗಾಗಿ ಸುಮಾರು 20 ರಿಂದ 25 ಕಿ.ಮೀ. ದೂರದ ಹಳ್ಳಿಗಳಿಗೆ ಹೋಗಿ ತರುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ವಿಕ್ರಮ ಬಣಗೆ ಆರೋಪಿಸಿದ್ದಾರೆ.
ಒಂದು ಕಡೆ ಕೊರೊನಾ ಭಯವಾದರೆ, ಇನ್ನೊಂದು ಕಡೆಗೆ ಈ ತೊಂದರೆ. ಜಮೀನುಗಳಿಗೆ ಗೊಬ್ಬರ ಹಾಕಬೇಕಾದರೆ ಸರಿಯಾಗಿ ಗೊಬ್ಬರ ಸಿಗುತ್ತಿಲ್ಲ. ಅದಕ್ಕಾಗಿ ರಸಗೊಬ್ಬರಗಳ ಅಂಗಡಿಗಳನ್ನು ದಿನಕ್ಕೆ ಮೂರ್ನಾಲ್ಕು ಗಂಟೆಯಾದರೂ ತೆರೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಚಿಕ್ಕೋಡಿಯಲ್ಲಿ ರಸಗೊಬ್ಬರಗಳ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ತೆರೆಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.