ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿಯವರಿಗೇ ಮತ್ತೊಮ್ಮೆ ಟಿಕೆಟ್ ನೀಡಲಾಗುವುದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ಹುಕ್ಕೇರಿ ಬಿಟ್ಟರೆ ಬೇರೆ ಅಭ್ಯರ್ಥಿಗಳ್ಯಾರೂ ಟಿಕೆಟ್ ಕೇಳಿಲ್ಲ. ಹಾಗಾಗಿ ಪ್ರಕಾಶ್ ಹುಕ್ಕೇರಿ ಅವರೇ ಚಿಕ್ಕೋಡಿ ಲೋಕಸಭೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ ಎಂದರು.
ಈಗಾಗಲೇ ಬೆಳಗಾವಿಯಿಂದ ಎರಡು ಹೆಸರು ಆಯ್ಕೆ ಮಾಡಲಾಗಿದೆ. ಶಿವಕಾಂತ್ ಸಿದ್ನಾಳ್ ಹಾಗೂ ಡಾ.ಸಾಧುನವರ ಅವರ ಹೆಸರು ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುಲಿದ್ದು, ಮಾರ್ಚ್ 20 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.