ಚಿಕ್ಕೋಡಿ : ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ಸಂಸದ ಅಣ್ಣಾಸಾಹೇಬ್ ಜೊಲ್ಲೆ ನಡುವೆ ನಡೆಯುತ್ತಿರುವ ಫೈಟ್ನಿಂದಾಗಿ ಕಳೆದ ಎರಡು ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದ ಕೇಂದ್ರೀಯ ವಿದ್ಯಾಲಯದ ಶಾಲಾ ಕಟ್ಟಡ ಉದ್ಘಾಟನೆ ಭಾಗ್ಯದಿಂದ ವಂಚಿತವಾಗಿದೆ.
ಪಟ್ಟಣದ ಆರ್ಟಿಒ ಕಚೇರಿ ಪಕ್ಕದಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಕೋಟ್ಯಂತರ ಅನುದಾನ ವ್ಯಯಿಸಿ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮಾಜಿ ಸಂಸದ ಪ್ರಕಾಶ್ ಹುಕ್ಕೇರಿಯವರು ಸಂಸದರಿದ್ದ ವೇಳೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ವಿದ್ಯಾಲಯಕ್ಕೆ ಅನುದಾನ ತಂದು ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಕಟ್ಟಡ ಕಾಮಗಾರಿ ಮುಗಿದು ಎರಡು ವರ್ಷಗಳೆ ಕಳೆದಿದೆ. ಆದರೆ, ಈವರೆಗೂ ಮಕ್ಕಳ ಕಲಿಕೆಗೆ ಉಪಯೋಗಕ್ಕೆ ಮುಕ್ತವಾಗಿಲ್ಲ.
ಹೀಗಾಗಿ, ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಬೇರೊಂದು ಸರ್ಕಾರಿ ಮಾದರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೊಠಡಿಗಳ ಅಭಾವ ಉಂಟಾಗಿದೆ. ಇದರ ನಡುವೆ ಕೊರೊನಾ ಹರಡುವ ಭೀತಿ ಕಾಡುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ನಡುವಿನ ಜಗಳವನ್ನು ಬದಿಗೊತ್ತಿ ವಿದ್ಯಾರ್ಥಿಗಳ ಭವಿಷ್ಯ, ಆರೋಗ್ಯದ ಹಿತದೃಷ್ಟಿಯಿಂದ ಆದಷ್ಟು ಬೇಗ ಕೇಂದ್ರೀಯ ವಿದ್ಯಾಲಯದ ಕಟ್ಟಡವನ್ನು ಉದ್ಘಾಟಿಸಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಮಾಜಿ -ಹಾಲಿ ಸಂಸದರ ನಡುವೆ ಫೈಟ್ : ಮಾಜಿ ಸಂಸದ ಪ್ರಕಾಶ್ ಹುಕ್ಕೇರಿಯವರು ಕೇಂದ್ರೀಯ ವಿದ್ಯಾಲಯದ ಕಾಮಗಾರಿಗೆ ಅನುವು ಮಾಡಿಕೊಟ್ಟಿದ್ದರು. ಬಳಿಕ ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರ ಅಧಿಕಾರವಧಿಯಲ್ಲಿ ವಿದ್ಯಾಲಯ ಪೂರ್ಣಗೊಂಡಿದೆ. ಆದರೆ, ಉದ್ಘಾಟನಾ ಕಾರ್ಯಕ್ರಮವೂ ತಮ್ಮ ನೇತೃತ್ವದಲ್ಲಿ ನಡೆಯಬೇಕೆಂಬ ಸಂಸದರ ರಾಜಕೀಯ ಪ್ರತಿಷ್ಠೆಯಿಂದ ಕೇಂದ್ರೀಯ ವಿದ್ಯಾಲಯದ ಕಟ್ಟಡ ಉದ್ಘಾಟನೆಗೊಂಡಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕೋವಿಡ್ ಹರಡುವ ಆತಂಕ : ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಆದರೆ, ಕೊಠಡಿ ಅಭಾವದಿಂದ ಮಕ್ಕಳು ಪಕ್ಕ-ಪಕ್ಕದಲ್ಲೇ ಕುಳಿತು ಪಾಠ ಕೇಳುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರೀಯ ವಿದ್ಯಾಲಯ ಉದ್ಘಾಟನೆ ಮಾಡಬೇಕು ಎಂಬುವುದು ಎಲ್ಲರ ಒತ್ತಾಸೆಯಾಗಿದೆ.
ಇದನ್ನೂ ಓದಿ: ಒಂದೇ ಸಮಯದಲ್ಲಿ ಎರಡು ವಿಮಾನಗಳು ಟೇಕ್ ಆಫ್; ಬೆಂಗಳೂರಲ್ಲಿ ತಪ್ಪಿತು ಭಾರಿ ಅನಾಹುತ!