ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗಿದ್ದರಿಂದ ಮಾರುಕಟ್ಟೆಗೆ ಹಣ್ಣು ಸಾಗಣೆ ಕೊರತೆ ಉಂಟಾಗಿದೆ. ಇದ್ದರಿಂದ ಹಣ್ಣು ಹಂಪಲುಗಳ ಬೆಲೆ ದುಬಾರಿಯಾಗಿದೆ.
ಕಳೆದ ಸಾಲಿನಲ್ಲಿ ದೇವಗಡ, ಆಪೂಸ ಮತ್ತು ಕೇಶರ ಮಾವಿನ ಹಣ್ಣು ಪ್ರತಿ ಡಜನ್ 500 ರಿಂದ 600 ರೂ. ಮತ್ತು ಸಾವಯವ ಮಾವಿನ ಹಣ್ಣು 600 ರಿಂದ 800 ರೂ. ಡಜನ್ ಮಾರಾಟವಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ದೇವಗಡ, ಆಪೂಸ ಮತ್ತು ಕೇಶರ ಮಾವಿನ ಹಣ್ಣು ಪ್ರತಿ ಡಜನ್ಗೆ 900 ರಿಂದ 1,100 ರೂ ಮತ್ತು ಸಾವಯವ ಮಾವಿನ ಹಣ್ಣು 1,200 ರಿಂದ 1,600 ರೂ. ಡಜನ್ ಮಾರಾಟವಾಗುತ್ತಿವೆ.
ಮಹಾರಾಷ್ಟ್ರದಲ್ಲಿ ವೀಕೆಂಡ್ ಲಾಕ್ಡೌನ್ನಿಂದಾಗಿ ಅಲ್ಲಿನ ಕೊಂಕಣ ಪ್ರದೇಶದಲ್ಲಿ ಬೆಳೆದ ಮಾವಿನ ಹಣ್ಣು ಸಾಗಿಸಲು ಬಾಡಿಗೆ ವಾಹನದವರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರಾಜ್ಯದ ಮಾರುಕಟ್ಟೆಯಲ್ಲಿ ಹಣ್ಣು ಕಡಿಮೆಯಿದ್ದು ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಮಾವಿನ ಹಣ್ಣಿನ ಬೆಲೆ ದುಬಾರಿಯಾಗಿದೆ.
ಮಾರುಕಟ್ಟೆಯಲ್ಲಿ ಆಪೂಸ, ಪಾಯರಿ, ದೇವಗಡ ಆಪೂಸ, ರತ್ನಾಗಿರಿ ಆಪೂಸ, ಕೇಶರ ಮತ್ತು ಸಾದಾ ಮಾವಿನ ಹಣ್ಣು ಬಂದಿದ್ದರೂ ಹಣ್ಣಿನ ಬೆಲೆ ದುಬಾರಿಯಾಗಿದ್ದರಿಂದ ಜನಸಾಮಾನ್ಯರು ಹಣ್ಣು ನೋಡಲು ಸಹ ಹಿಂಜರಿಯುತ್ತಿದ್ದಾರೆ.
ಈ ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಚಿಲ್ಲರೆ ಮಾರಾಟಗಾರರು ಮಾರಾಟ ಮಾಡುತ್ತಿದ್ದರು. ಆದರೆ ಈ ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟಗಾರರೇ ಬಂದಿಲ್ಲ, ಕೇವಲ ಪಟ್ಟಣ ಪ್ರದೇಶಗಳಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದಾರೆ. ಚಿಲ್ಲರೆ ಮಾರಾಟಗಾರರನ್ನು ಕೇಳಿದರೆ ಬೆಲೆ ಕೇಳಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಬಡವರು ಇರಲಿ ಶ್ರೀಮಂತರು ಸಹ ಬೆಲೆ ಕೇಳಿ ಖರೀದಿಸಲು ಹಿಂಜರಿಯುತ್ತಿದ್ದಾರೆ ಎನ್ನುತ್ತಾರೆ. ಈ ಬಾರಿ ನಮಗೂ ಬೆಲೆ ದುಬಾರಿಯಿಂದ ತೊಂದರೆ ಅನುಭವಿಸುವ ಪ್ರಸಂಗ ಬಂದಿದೆ ಎಂದು ಚಿಲ್ಲರೆ ವ್ಯಾಪಾರಿಗಳು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.