ಅಥಣಿ (ಬೆಳಗಾವಿ): ಭೂಮಿ ಕಳೆದುಕೊಂಡ ರೈತರಿಗೆ ಚಿಕ್ಕೋಡಿ ಅಧಿಕಾರಿಗಳು ಪರಿಹಾರ ನೀಡದ ಹಿನ್ನೆಲೆ ಚಿಕ್ಕೋಡಿ ಉಪವಿಭಾಗಾಧಿಕಾರಿ ಹಾಗೂ ಲೋಕೋಪಯೋಗಿ ಕಚೇರಿ ಜಪ್ತಿ ಮಾಡುವಂತೆ ಚಿಕ್ಕೋಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಆದೇಶದ ಮೇರೆಗೆ ವಾಹನ ಹಾಗೂ ಪೀಠೋಪಕರಣಗಳನ್ನು ನ್ಯಾಯಾಲಯದ ಬಿಲಿಪ್ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕಳೆದ 15 ವರ್ಷದ ಹಿಂದೆ ರಸ್ತೆ ನಿರ್ಮಾಣಕ್ಕೆ ಚಿಕ್ಕೋಡಿ ತಾಲೂಕಿನ ಮಾಂಗೂರ ಗ್ರಾಮದ ನಿವಾಸಿ ಬುದ್ದಿರಾಜ ಶಾಂತಿನಾಥ ಪಾಟೀಲ್ ಎಂಬುವವರ ಜಮೀನನ್ನು ಸರ್ಕಾರ ಪಡೆದಿತ್ತು. ಅದಕ್ಕೆ ಇದುವರೆಗೂ ಅಧಿಕಾರಿಗಳು ಪರಿಹಾರ ನೀಡದ ಹಿನ್ನೆಲೆ ಕಳೆದ ವರ್ಷ (2021) ರಲ್ಲಿ ಅಂತಿಮವಾಗಿ ಭೂಮಿ ಕಳೆದುಕೊಂಡ ರೈತರಿಗೆ 11,70,757 ಪರಿಹಾರ ನೀಡುವಂತೆ ಚಿಕ್ಕೋಡಿ ನ್ಯಾಯಾಲಯ ಆದೇಶ ನೀಡಿತ್ತು.
ಕೋರ್ಟ್ ಆದೇಶ ಮಾಡಿದರೂ ಅಧಿಕಾರಿಗಳು ರೈತನಿಗೆ ಪರಿಹಾರ ನೀಡದ ಹಿನ್ನೆಲೆ ಅಂತಿಮವಾಗಿ ವಾಹನ ಹಾಗೂ ಪೀಠೋಪಕರಣಗಳನ್ನು ವಶಪಡಿಸಿಕೊಳ್ಳುವಂತೆ ಕೋರ್ಟ್ ಆದೇಶ ನೀಡಿದೆ. ಇದರ ಮೇರೆಗೆ ಇವತ್ತು ಕೋರ್ಟ್ ಬಿಲಿಪ್ ಚಿಕ್ಕೋಡಿ ಎಸಿ ಹಾಗೂ ಪಿಡಬ್ಲ್ಯೂಡಿ ಎರಡು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇದನ್ನೂ ಓದಿ: 'ಶಾಶ್ವತ ಪರಿಹಾರ ಸಿಗೋವರೆಗೂ ಶರಾವತಿ ಮುಳುಗಡೆ ಸಂತ್ರಸ್ತರ ಹೋರಾಟ'
ವಾಹನಗಳ ಜಪ್ತಿ ಮಾಡುವ ಸಂದರ್ಭದಲ್ಲಿ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಹಾದೇವ ಗಿತ್ತೆ ಮತ್ತು ನ್ಯಾಯಾಲಯದ ಬಿಲಿಪ್ ಜೊತೆಗೆ ಮಾತಿನ ಚಕಮಕಿ ನಡೆಯಿತು. ಈ ವೇಳೆ, ಮಹಾದೇವ ಗಿತ್ತೆ ಕೋರ್ಟ್ ಆದೇಶ ಹರಿಯಲು ಮುಂದಾಗಿದ್ದರು. ನಾನು ಮ್ಯಾಜಿಸ್ಟ್ರೇಟ್ ಇದ್ದೀನಿ ನನ್ನ ಪವರ್ ತೋರಿಸ್ತೀನಿ ಎಂದು ಕಿರಿಕ್ ಮಾಡಿದರೂ ಎಂದು ಚಿಕ್ಕೋಡಿ ಕೋರ್ಟ್ ಬಿಲಿಪ್ ವಿಜಯ ಶಿವಪ್ಪ ಸಾಗರ ಎಂಬುವರು ಆರೋಪಿಸಿದ್ದಾರೆ.