ಬೆಳಗಾವಿ: ಹೆಚ್ಚುತ್ತಿರುವ ಕೊರೊನಾ ವೈರಸ್ ನಿರ್ಮೂಲನೆಗಾಗಿ ಶಾಸಕ ಅನಿಲ್ ಬೆನಕೆ ಅವರ ನೇತೃತ್ವದಲ್ಲಿ ನಗರದ ಶ್ರೀ ಮರಗಾಯಿ ದೇವಿಗೆ ಮಹಾಪೂಜೆ ಹಾಗೂ ಚಂಡಿಕಾ ಹೋಮ ಮಾಡಲಾಯಿತು.
ಬಾಂದೂರ ಗಲ್ಲಿಯಲ್ಲಿರುವ ಗ್ರಾಮ ದೇವತೆ ಮರಗಾಯಿ ದೇವಿಯಗೆ ಕೊರೊನಾ ನಿರ್ಮೂಲನೆಗಾಗಿ ಶಾಸಕ ಬೆನಕೆ ಹಾಗೂ ಗಲ್ಲಿಯ ನಿವಾಸಿಗಳಿಂದ ಮಹಾಪೂಜೆ ಹಾಗೂ ಚಂಡಿಕಾ ದೇವಿಯ ಹೋಮ ಮಾಡುವ ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಪೂಜೆ ಬಳಿಕ ಮಾತನಾಡಿದ ಶಾಸಕರು, ಕಳೆದ ಏಳೆಂಟು ತಿಂಗಳಿನಿಂದ ಕಾಡುತ್ತಿರುವ ಕೊರೊನಾಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಸೇರಿದಂತೆ ಎಲ್ಲ ರಂಗಗಳ ಆದಾಯದಲ್ಲಿ ಕುಂಠಿತವಾಗಿದೆ. ದೇಶದ ಜನರ ಜೀವನಮಟ್ಟ ಕುಸಿತವಾಗಿದೆ. ಹೀಗಾಗಿ ಕೊರೊನಾ ವೈರಸ್ ಆದಷ್ಟು ಬೇಗ ವಿಮುಕ್ತಿ ಹೊಂದಲು ಗ್ರಾಮದೇವಿಯ ಅನುಗ್ರಹ ಬೇಕಿದೆ. ಮೊದಲಿನಂತೆಯೇ ಜನರ ಜೀವನ ಸಮೃದ್ಧಿಯಿಂದ ಕೂಡಿ ಒಳ್ಳೆಯ ಆಯೂರಾರೋಗ್ಯವನ್ನು ಕೊಟ್ಟು ಆ ದೇವಿ ಕಾಪಾಡಬೇಕು. ಆ ದೇವಿಯ ಕೃಪಾ ಕಟಾಕ್ಷ ಎಲ್ಲರ ಮೇಲಿರಲಿ ಎಂದು ಆ ದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ಇದೇ ವೇಳೆ, ಸಾರ್ವಜನಿಕರು ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.