ಚಿಕ್ಕೋಡಿ: ನದಿ ಮಹಾಪೂರದಿಂದ ಉಂಟಾಗಿರುವ ಸಮಸ್ಯೆಗಳನ್ನು ಆಲಿಸಲು ಕೇಂದ್ರ ತಂಡ ನಿರ್ಲಕ್ಷಿಸಿದೆ ಎಂದು ಜುಗೂಳ ಗ್ರಾಮಸ್ಥರು ಆರೋಪಿಸಿ, ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಹದಿಂದ ನದಿ ತೀರದ ಜನರ ಮನೆಗಳು ಜಲಾವೃತಗೊಂಡಿದ್ದು, ಭಾರಿ ನಷ್ಟ ಉಂಟಾಗಿದೆ. ಕಾಗವಾಡ ತಾಲೂಕಿನ ಗ್ರಾಮಗಳಾದ ಜುಗೂಳ, ಮಂಗಾವತಿ, ಶಹಾಪುರ ಗ್ರಾಮದ ಜನತೆ ಕೇಂದ್ರದ ಅಧ್ಯಯನ ತಂಡ ಗ್ರಾಮಕ್ಕೆ ಭೇಟಿ ನೀಡಲಿದೆ ಎಂದು ಕಾಯುತ್ತಿದ್ದರು. ಮಧ್ಯಾಹ್ನ ಎರಡು ಗಂಟೆಗೆ ಅಧಿಕಾರಿಗಳ ಕಾರುಗಳು ಗ್ರಾಮಕ್ಕೆ ಬಂದು ಹೋದವು. ಯಾವುದೇ ಅಧಿಕಾರಿ ಕೆಳಗೆ ಇಳಿಯದೆ, ಯಾವುದೇ ಗ್ರಾಮಸ್ಥರನ್ನು ಭೇಟಿಯಾಗದೆ ಹೋಗಿದ್ದಾರೆ ಎಂದು ಆತ ಆಗ್ರಹಿಸಿದ್ದಾರೆ.
ಗ್ರಾಮಸ್ಥರು ಒಂದು ಮನವಿ ಮಾಡಿಕೊಂಡು, ಅಧ್ಯಯನ ತಂಡಕ್ಕೆ ನೀಡಲು ಕಾಯುತ್ತಿದ್ದರು. ಆದರೆ, ಈ ಅವಕಾಶ ದೊರೆಯಲಿಲ್ಲ. ಇದರಿಂದ ಎಲ್ಲ ರೊಚ್ಚಿಗೆದ್ದ ಗ್ರಾಮಸ್ಥರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.