ಬೆಳಗಾವಿ: ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ಲಾನ್ ಮಾಡಿದ್ದೇವೆ. ಆದರೆ ನಮ್ಮ ಮಷಿನ್ ಹ್ಯಾಕ್ ಮಾಡಿ ಕೇಂದ್ರದವರು ಸ್ಟಾಪ್ ಮಾಡಿದ್ದಾರೆ. ಇದರಿಂದಲೇ ಸರ್ವರ್ ಡೌನ್ ಆಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಅಕ್ಕಿ ವಿಚಾರದಲ್ಲಿ ಕೇಂದ್ರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಪ್ಲ್ಯಾನ್ ಮಾಡದೇ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ವಿಚಾರಕ್ಕೆ ಈ ರೀತಿ ಉತ್ತರಿಸಿದರು.
ಇವಿಎಂ ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ. ಹೆಬ್ಬಾಳ್ಕರ್ ಮೇಡಂ ಇಲಾಖೆಯನ್ನು ಕೂಡ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಹಾಗಾಗಿ ತಡವಾಗುತ್ತಿದೆ. ನಮ್ಮ ಸಿಸ್ಟಮ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಅದನ್ನು ಸರಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಎಷ್ಟೇ ಹ್ಯಾಕ್ ಮಾಡಿದ್ರೂ ನಮ್ಮ ಯೋಜನೆ ಜಾರಿಗೆ ತರುತ್ತೇವೆ ಎನ್ನುವ ಮೂಲಕ ಆನ್ಲೈನ್ ಸರ್ವರ್ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಸತೀಶ ಜಾರಕಿಹೊಳಿ ಮಾಡಿದರು.
ಇನ್ನು ಆನ್ಲೈನ್ನಲ್ಲಿ ಸಮಸ್ಯೆ ಆದರೆ ಕೈಯಿಂದ ಅರ್ಜಿ ಸ್ವೀಕಾರ ಮಾಡುತ್ತೇವೆ. ಒಂದು ತಿಂಗಳು ತಡ ಆಗಬಹುದು. ಅದಕ್ಕಿಂತ ಹೆಚ್ಚು ವಿಳಂಬ ಆಗೋದಿಲ್ಲ ಎಂದರು. ಇದೇ ವೇಳೆ ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಇರ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈ ವಿಚಾರವನ್ನು ಸಿದ್ದರಾಮಯ್ಯನವರನ್ನೇ ನೀವು ಕೇಳಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ಸ್ಮಾರ್ಟ್ಸಿಟಿ ಎಂಡಿ ವಿರುದ್ಧ ಕೇಸ್ ದಾಖಲು ವಿಚಾರಕ್ಕೆ ಕಳೆದ ಎರಡ್ಮೂರು ವರ್ಷಗಳಿಂದ ಕೆಲಸ ನಡೆಯುತ್ತಿದೆ. ಒಬ್ಬರಲ್ಲಾ ಮೂರು ಎಂಡಿಗಳು ಜವಾಬ್ದಾರರು. ಪೊಲೀಸರು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಇನ್ನು ಪಾರಂಪರಿಕ ಪಟ್ಟಿಯಲ್ಲಿರುವ ಕಟ್ಟಡಕ್ಕೆ ಹಾನಿ ಮಾಡಿದ್ದಾರೆ. ಅನುಮತಿ ಇಲ್ಲದೇ ಗಿಡಗಳನ್ನು ಕಡಿದಿದ್ದಾರೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಪೊಲೀಸರ ಗಮನಕ್ಕೆ ಬಂದಿದ್ದರೂ ರಾಜಕೀಯ ಒತ್ತಡದಿಂದ ಈ ಹಿಂದೆ ಕ್ರಮ ಕೈಗೊಂಡಿಲ್ಲ. ಈಗ ವಾತಾವರಣ ಬದಲಾವಣೆ ಆಗಿದೆ. ದೂರು ಕೊಟ್ಟಿದ್ದೇವೆ. ಮುಕ್ತವಾಗಿ ತನಿಖೆ ಆಗಲಿದೆ ಎಂದ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಲೋಕಾಯುಕ್ತದಲ್ಲಿ ಬುಡಾ ಆಯುಕ್ತರ ವಿರುದ್ಧವೂ ದೂರು ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗುತ್ತದೆ ಎಂದರು.
ಲೋಕಸಭೆ ಚುನಾವಣೆವರೆಗೂ ಅಷ್ಟೇ ಅಲ್ಲ ಐದು ವರ್ಷದವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ. ಅಕ್ಕಿ ಕೊಟ್ಟೇ ಕೊಡುತ್ತೇವೆ. ನಮ್ಮ ಡಿಮ್ಯಾಂಡ್ ನಿಮ್ಮ ಬಳಿ ಇರೋದು ಕೊಡಿ ಅನ್ನೊದಷ್ಟೇ. ಕೇಂದ್ರ ಸರ್ಕಾರ ಕೇಳಿ ಘೋಷಣೆ ಮಾಡುವ ಅವಶ್ಯಕತೆಯಿಲ್ಲ. ಅವರ ಬಳಿ ದಾಸ್ತಾನು ಅಕ್ಕಿ ಕೊಡಿ ಅಂತಾ ಕೇಳ್ತಿದ್ದೇವೆ. ಫ್ರೀಯಾಗಿ ಕೇಳ್ತಿಲ್ಲ ದುಡ್ಡು ಕೊಡ್ತೀವಿ ಕೊಡಿ ಅಂತಾ ಕೇಳ್ತಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಬಿಜೆಪಿಗೆ ತಿರುಗೇಟು ಕೊಟ್ಟರು.
ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆಗದಿರುವ ವಿಚಾರಕ್ಕೆ ಇವತ್ತಿನಿಂದ ಮಳೆ ಪ್ರಾರಂಭ ಆಗುತ್ತೆ ಅಂತಾ ಹವಾಮಾನ ಇಲಾಖೆ ಹೇಳಿದೆ. ಅವಶ್ಯಕತೆ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚನೆ ಕೊಟ್ಟಿದ್ದೇವೆ. ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ಇದೆ. ಬೋರ್ವೆಲ್ಗಳಲ್ಲಿ ನೀರು ಇಲ್ಲದೇ ಇರುವುದರಿಂದ ಸಮಸ್ಯೆ ಆಗಿದೆ. ಒಂದು ವಾರದಲ್ಲಿ ಮಳೆ ಆದರೆ ಪರಿಸ್ಥಿತಿ ಸುಧಾರಣೆ ಆಗಲಿದೆ ಎಂದರು.
ಇದು ಡಬಲ್ ಬಿಲ್ ಸರ್ಕಾರ ಎಂಬ ಬಿಜೆಪಿ ಆರೋಪಕ್ಕೆ, ಮಾರ್ಚ್ ತಿಂಗಳಲ್ಲೆ ಕೆಇಆರ್ಸಿ ವಿದ್ಯುತ್ ದರ ಏರಿಸುವ ತೀರ್ಮಾನ ಮಾಡಿದೆ. ಜಾರಿಯಾಗಿದ್ದು, ಫಲಿತಾಂಶ ಬರುವ ಒಂದು ದಿನ ಮೊದಲು 12ನೇ ತಾರೀಖು. ಆ ಎಲ್ಲಾ ಜವಾಬ್ದಾರಿ ಹೊಣೆಗಾರಿಕೆ ಬಿಜೆಪಿಯದ್ದಾಗಿದೆ. ಒಂದು ತಿಂಗಳು ಜಾಸ್ತಿಯಾಗಿದೆ. ಜಾಸ್ತಿ ಯಾಕೆ ಆಗಿದೆ ಎಂಬ ಬಗ್ಗೆ ಈಗಾಗಲೇ ಸಿದ್ದರಾಮಯ್ಯನವರು ಹೇಳಿದ್ದಾರೆ. ಮೂರು ತಿಂಗಳ ಬಿಲ್ ಕೊಡಿಸಿ ಕೊಟ್ಟಿದ್ದಾರೆ. ಹೀಗಾಗಿ ಮುಂದಿನ ತಿಂಗಳು ಸರಿಯಾಗುತ್ತದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: 15 ಕೆ.ಜಿ ಅಕ್ಕಿ ನೀಡದಿದ್ದರೆ ಸದನದ ಒಳಗೆ ಹೊರಗೆ ಹೋರಾಟ: ಮಾಜಿ ಸಿಎಂ ಬೊಮ್ಮಾಯಿ