ಬೆಳಗಾವಿ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಗೃಹಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ. ಪ್ರತಾಪ್ ನೇತೃತ್ವದ ಕೇಂದ್ರ ಅಧ್ಯಯನ ತಂಡವು ಮಂಗಳವಾರ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲಿದೆ.
ಜಿಲ್ಲೆಯ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಬೆಳಿಗ್ಗೆ 9.15 ಗಂಟೆಗೆ ನಗರದ ಪ್ರವಾಸಿಮಂದಿರದಲ್ಲಿ ಕೇಂದ್ರ ತಂಡಕ್ಕೆ ಮಾಹಿತಿಯನ್ನು ನೀಡಲಿದ್ದಾರೆ. ನಂತರ ಪ್ರವಾಸ ಆರಂಭಿಸಲಿರುವ ಕೇಂದ್ರ ಅಧ್ಯಯನ ತಂಡವು ಹುಕ್ಕೇರಿ ತಾಲೂಕಿನ ಬಡಕುಂದ್ರಿ, ಯರನಾಳ, ಹೊಸೂರ ಹಾಗೂ ಇಂಗಳಿ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆಹಾನಿ ಪರಿಶೀಲಿಸಲಿದೆ. ಅಲ್ಲಿಂದ ಗೋಕಾಕ ತಾಲೂಕಿನ ಮಸಗುಪ್ಪಿ, ತಿಗಡಿ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆಹಾನಿ ಹಾಗೂ ಲೋಳಸೂರ ಸೇತುವೆ ಪರಿಶೀಲನೆ ಬಳಿಕ ಸವದತ್ತಿ ತಾಲೂಕಿಗೆ ತೆರಳಲಿದೆ.
ಕೇಂದ್ರ ಅಧ್ಯಯನ ತಂಡವು ಸವದತ್ತಿಯಲ್ಲಿ ಬೆಳೆಹಾನಿ ಪರಿಶೀಲನೆ ಬಳಿಕ ಇನಾಂಹೊಂಗಲ್ ಮಾರ್ಗವಾಗಿ ಧಾರವಾಡ ಜಿಲ್ಲೆಗೆ ಪ್ರಯಾಣ ಬೆಳೆಸಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.