ಬೆಳಗಾವಿ: ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸರ್ಕಾರದಿಂದ ವಿತರಿಸಲಾಗುತ್ತಿರುವ ಪೌಷ್ಟಿಕ ಆಹಾರದ ಪೈಕಿ ಮೊಟ್ಟೆ ವಿತರಣೆಯ ಟೆಂಡರಿನಲ್ಲಿ ಅಕ್ರಮ ಹಾಗೂ ಲಂಚ ಪಡೆದಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಸುರೇಂದ್ರ ಉಗಾರೆ ಅವರು ಬೆಳಗಾವಿ ನಗರದ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೂಡೆ ಅವರಿಗೆ ದೂರು ಸಲ್ಲಿಸಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಸಚಿವರ ಆಪ್ತರಾಗಿದ್ದ ಸಂಜಯ ಅರಗೆ ಹಾಗೂ ಪ್ರಶಾಂತ್ ಘಾಟಗೆ ವಿರುದ್ಧ ದೂರು ದಾಖಲಾಗಿದೆ.
ಸಚಿವೆ ಜೊಲ್ಲೆಯ ಆಪ್ತ ಕಾರ್ಯದರ್ಶಿ ಪ್ರಶಾಂತ್ ಘಾಟಗೆ ಅವರು ಶಾಸಕ ಪರಣ್ಣ ಮುನವಳ್ಳಿ ಅವರನ್ನು ಸಚಿವೆ ಬಳಿ ಭೇಟಿ ಮಾಡಿಸಿದ್ದಾರೆ. ಈ ವೇಳೆ, ಸಚಿವರು ಶಾಸಕರ ಬಳಿ 1 ಕೋಟಿ ರೂಪಾಯಿ ಹಾಗೂ ಪ್ರತಿ ತಿಂಗಳು 30 ಲಕ್ಷ ರೂಪಾಯಿ ನೀಡಬೇಕು ಎಂದು ಕೇಳಿರುವುದು ಬಹಿರಂಗವಾಗಿದೆ. ಅಲ್ಲದೆ ಸಂಜಯ ಅರಗೆ ಅವರು ಮುಂಗಡವಾಗಿ ₹ 30 ಲಕ್ಷ ರೂಪಾಯಿ ತೆಗೆದುಕೊಂಡಿದ್ದಾರೆ. ಶಾಸಕ ಮುನವಳ್ಳಿ ಅವರು ಮುಂಗಡವಾಗಿ ಒಂದು ಉಂಗುರ ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಓದಿ: ಪ್ರವಾಹ ಕುರಿತ ಚರ್ಚೆಗೆ ಅಧಿವೇಶನ ನಡೆಸಲೇಬೇಕು: ಸಿದ್ದರಾಮಯ್ಯ ಆಗ್ರಹ