ಬೆಳಗಾವಿ: ಇತ್ತೀಚೆಗೆ ಕೊಲೆಗೀಡಾದ ಉದ್ಯಮಿ ರಾಜು ಝಂವರ್ ಮೃತದೇಹ ಆರು ದಿನಗಳ ಬಳಿಕ ಪಂಚನಾಯಕನಟ್ಟಿ ಬಳಿ ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ದೊರೆತಿದೆ. ಮೃತದೇಹಕ್ಕಾಗಿ ಮೆಗಾ ಸರ್ಚ್ ಆಪರೇಷನ್ ಕೈಗೊಂಡಿದ್ದ ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಯ ಪೊಲೀಸರು ಶವ ಪತ್ತೆ ಮಾಡಿದ್ದಾರೆ.
ಜಾಗ ಖರೀದಿಗೆ ಕೊಟ್ಟ ಹಣ ಹಿಂದಿರುಗಿಸಲು ಹೇಳಿದ್ದಕ್ಕೆ ರಾಜು ಝಂವರ್ ಅವರನ್ನು ವೈದ್ಯ ಸಚಿನ್ ಎನ್ನುವವರು ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಯೋಗಿಕೊಳ್ಳ ಮಾರ್ಗದ ಮಾರ್ಕಂಡೇಯ ನದಿ ದಡದಲ್ಲಿ ರಕ್ತದ ಕಲೆ, ಮುರಿದ ಕನ್ನಡಕ, ಪೆನ್ ದೊರೆತಿತ್ತು. ಆರೋಪಿ ನೀಡಿದ ಹೇಳಿಕೆಯ ಆಧಾರದಲ್ಲಿ ಸುಮಾರು 350 ಮಂದಿ ಪೊಲೀಸರು ಜಂಟಿ ಶೋಧ ಕಾರ್ಯ ನಡೆಸಿದ್ದರು. ಶವವನ್ನು ಜೆಸಿಬಿ ಯಂತ್ರದ ಮೂಲಕ ಹೊರತೆಗೆಯಲಾಗಿದೆ.
ಇದನ್ನೂ ಓದಿ: ಸಾವಿನಲ್ಲೂ ಒಂದಾದ ಅಣ್ಣಾ, ತಮ್ಮ: ಒಂದೇ ದಿನ ಸಂಗೀತದ ಸ್ವರ ನಿಲ್ಲಿಸಿದ ಸಹೋದರರು..
ಫೆಬ್ರವರಿ 10ರ ರಾತ್ರಿ ಗೋಕಾಕ್ ನಗರದಿಂದ ರಾಜು ಝಂವರ್ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಗೋಕಾಕ್ ಶಹರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ರಾಜು ಮೊಬೈಲ್ ಸಂಖ್ಯೆಗೆ ಕೊನೆಯದಾಗಿ ಕರೆ ಮಾಡಿದವರನ್ನು ಕರೆದು ವಿಚಾರಿಸಿದ್ದರು. ವೈದ್ಯ ಸಚಿನ್ ಶಿರಗಾವಿ ಅವರು ಕೊನೆಯ ಬಾರಿ ಕರೆ ಮಾಡಿದ್ದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕರೆದು ವಿಚಾರಿಸಿದಾಗ ಮೂವರು ಯುವಕರೊಂದಿಗೆ ಸೇರಿಕೊಂಡು ರಾಜು ಅವರನ್ನು ಹತ್ಯೆಗೈದು ಕೊಳವಿ ಬಳಿಯ ಕಾಲುವೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಇದೀಗ ಐವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ. ಇಬ್ಬರಿಗಾಗಿ ಶೋಧ ನಡೆಯುತ್ತಿದೆ.
ಮತ್ತಷ್ಟು ವಿವರ: ಉದ್ಯಮಿ ರಾಜು ಅವರು ಜಾಗ ಖರೀದಿಗಾಗಿ ವೈದ್ಯ ಸಚಿನ್ ಅವರಿಗೆ ಹಣ ನೀಡಿದ್ದರು. ಬಳಿಕ ಕೊಟ್ಟ ಹಣ ಹಿಂದಿರುಗಿಸಲು ಕೇಳಿದ್ದಾರೆ. ಫೆ.10ರ ರಾತ್ರಿ ರಾಜು ಝಂವರ್ಗೆ ಹಣ ನೀಡುವುದಾಗಿ ಸಚಿನ್ ತಮ್ಮ ಆಸ್ಪತ್ರೆಗೆ ಕರೆಸಿಕೊಂಡಿದ್ದರು. ಈ ವೇಳೆ ಮಾರ್ಕಂಡೇಯ ನದಿ ದಡಕ್ಕೆ ಅವರನ್ನು ಕರೆದೊಯ್ದ ಸಚಿನ್ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದರು. ಶವವನ್ನು ಕೊಳವಿ ಬಳಿಯ ಘಟಪ್ರಭಾ ಎಡದಂಡೆ ಕಾಲುವೆಗೆ ಎಸೆದಿದ್ದರು. ಈ ಬಗ್ಗೆ ಆರೋಪಿ ಸಚಿನ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿಯಲ್ಲಿ ಅಮಾನವೀಯ ಘಟನೆ: ರಸ್ತೆಯಲ್ಲಿ ಮೃತದೇಹ ಎಸೆದು ಹೋದ ಹಣ್ಣಿನ ವ್ಯಾಪಾರಿಗಳ ವಿಡಿಯೋ ವೈರಲ್