ಚಿಕ್ಕೋಡಿ/ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡಾಟಿಕೆ ಮುಂದುವರಿದ ಹಿನ್ನೆಲೆ ಎರಡನೇ ದಿನವೂ ಕರ್ನಾಟಕ ಮಹಾರಾಷ್ಟ್ರ ಮಧ್ಯೆ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ.
ಬೆಳಗಾವಿ ಮಾರ್ಗವಾಗಿ ನಿತ್ಯ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ 300ಕ್ಕೂ ಹೆಚ್ಚು ಬಸ್‌ಗಳು ಹಾಗೂ ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 58 ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ರಾಜ್ಯದ ಗಡಿ ಭಾಗದವರೆಗೆ ಮಾತ್ರ ಕರ್ನಾಟಕ ಸಾರಿಗೆ ಬಸ್‌ಗಳ ಸಂಚಾರವಿದೆ.
ನಿನ್ನೆ ಕೊಲ್ಲಾಪುರ, ಕಾಗಲ್ ಗ್ರಾಮದಲ್ಲಿ ಮತ್ತೆ ಪುಂಡಾಟ ಮೆರೆದಿದ್ದ ಶಿವಸೇನೆ ಪುಂಡರು, ಚಿಕ್ಕೋಡಿ ವಿಭಾಗದ ಬಸ್‌ಗೆ ಕಪ್ಪು ಮಸಿ ಬಳಿದಿದ್ದರು.
ಕೊಲ್ಲಾಪೂರ ಮಾರ್ಗ ಸ್ಥಗಿತ, ಮಿರಜ್ವರೆಗೆ ಮಾತ್ರ ಕೆಎಸ್ಆರ್‌ಟಿಸಿ ಬಸ್:
ಚಿಕ್ಕೋಡಿ ಉಪವಿಭಾಗದ ಕೇವಲ 10 ಬಸ್‌ಗಳನ್ನು ಮಹಾರಾಷ್ಟ್ರದ ಮಿರಜ್ ಮಾರ್ಗದ ಮೂಲಕ ಪ್ರಾಯೋಗಿಕವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಅಹಿತಕರ ಘಟನೆ ಸಂಭವಿಸಿದರೆ ಮಹಾರಾಷ್ಟ್ರದ ಮಿರಜ್ವರೆಗೆ ಕಳುಹಿಸಿದ ಬಸ್‌ಗಳನ್ನೂ ಮಧ್ಯದಾರಿಯಲ್ಲೇ ಮರಳಿ ಕರೆಸಿಕೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಬಿ.ಎಂ. ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಪ್ರತಿದಿನ ಚಿಕ್ಕೋಡಿ ಉಪವಿಭಾಗದಿಂದ ಮಹಾರಾಷ್ಟ್ರಕ್ಕೆ 150ಕ್ಕೂ ಹೆಚ್ಚು ಬಸ್‌ಗಳು ಮಹಾರಾಷ್ಟ್ರದ ಮಿರಜ್, ಸಾಂಗಲಿ, ಸಾತಾರ, ಕರಾಡ, ಜತ್ತ, ಕೊಲ್ಲಾಪೂರ, ಕಾಗಲ, ಇಂಚಲಕರಂಜಿ ಹೀಗೆ ಅಲ್ಲಿನ ಹಲವಾರು ತಾಲೂಕು, ಜಿಲ್ಲೆಗಳಿಗೆ ಸಂಚರಿಸುತ್ತಿದ್ದವು.
ಹೀಗೆ ಕಳೆದ ಎರಡು ದಿನಗಳಿಂದ ಗಡಿಯಲ್ಲಿ ಬಸ್ ಸಂಚಾರ ಇಲ್ಲದೆ, ಆ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ.