ಚಿಕ್ಕೋಡಿ: ಇಲ್ಲಿನ ಉಪ ವಿಭಾಗದಲ್ಲಿ ಬರುವ ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಬಸ್ ಸಂಚರಿಸಲು ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ ಜಿಲ್ಲೆಯ ಎಂಎಸ್‌ಆರ್‌ಟಿಸಿ ಅಧಿಕಾರಿಗಳು ಭೇಟಿ ನೀಡಿದ್ದು, 8-10 ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಎರಡೂ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದ್ದಲ್ಲಿ ಬಸ್ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಚಿಕ್ಕೋಡಿ ವಿಭಾಗದಿಂದ ಬಸ್ ಸಂಚರಿಸಲು ತಯಾರಾಗಿವೆ ಎಂದು ಕೆಎಸ್‌ಆರ್‌ಟಿಸಿ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಬಿ.ಎಂ. ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಗಣೇಶ ಹಬ್ಬದಲ್ಲಿ ನಮ್ಮ ಚಿಕ್ಕೋಡಿ ವಿಭಾಗಕ್ಕೆ 25 ಲಕ್ಷ ರೂಪಾಯಿ ಲಾಭ ಆಗುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದ ನಷ್ಟವಾಗಿದೆ. ಬರುವ ದೀಪಾವಳಿ, ದಸರಾ ಹಬ್ಬಕ್ಕೆ ಸಾಮಾಜಿಕ ಅಂತರ ಕಾಯ್ದುಕೊಂಡು ಜನರಿಗೆ ಸಾರಿಗೆ ವ್ಯವಸ್ಥೆ ಮಾಡಲು ಸಿದ್ಧರಿದ್ದೇವೆ. ಮೊದಲು ಒಂದು ದಿನಕ್ಕೆ 630 ಅನೂಸೂಚಿಗಳು ಕಾರ್ಯಾಚರಣೆ ಮಾಡುತ್ತಿದ್ದವು. ಈಗ 410 ಅನೂಸೂಚಿಗಳು ಕಾರ್ಯಾಚರಣೆ ಮಾಡುತ್ತಿವೆ. ಹಂತ ಹಂತವಾಗಿ ಅನಸೂಚಿಗಳನ್ನು ಹೆಚ್ಚು ಮಾಡುತ್ತಿದ್ದೇವೆ ಎಂದು ಹೇಳಿದರು.
ದಿನದಿಂದ ದಿನಕ್ಕೆ ಪ್ರಯಾಣಿಕರು ಬಸ್ ಕಡೆ ವಾಲುತ್ತಿದ್ದು, ಕೆಎಸ್‌ಆರ್‌ಟಿಸಿಗೆ ಕಳೆದ 15 ದಿನಗಳ ಹಿಂದೆ 14ರಿಂದ 15 ಲಕ್ಷ ಆದಾಯ ಬರುತ್ತಿತ್ತು. ಈಗ 20ರಿಂದ 21 ಲಕ್ಷ ಆದಾಯ ಬರುತ್ತಿದೆ. ಕಳೆದ ಒಂದು ವಾರದಿಂದ ಪ್ರತೀ ಹಳ್ಳಿಗೂ ಬಸ್ ಬಿಡುವ ವ್ಯವಸ್ಥೆ ಮಾಡಿದ್ದೇವೆ. ಬಸ್ ಚಾಲಕ, ನಿರ್ವಾಹಕರ ಜೊತೆಗೆ ಬಸ್‌ಗಳಿಗೂ ಕೂಡ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಪ್ರತೀ ಪ್ರಯಾಣಿಕರಿಗೆ ಮಾಸ್ಕ್ ಇದ್ದರೆ ಮಾತ್ರ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಕೊರೊನಾ ಬರುವ ಮೊದಲು ಪ್ರತೀ ದಿನ 60 ಲಕ್ಷ ಆದಾಯ ಬರುತ್ತಿತ್ತು. ಈಗ 21 ಲಕ್ಷ ಆದಾಯ ಬರುತ್ತಿದೆ ಎಂದು ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಹೇಳಿದರು.