ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುವ ದೇವೇಗೌಡರ ಕುಟುಂಬದ ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಬೈಲಹೊಂಗಲ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪುಲ್ವಾಮಾ ದಾಳಿ ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ. ಈ ವಿಷಯವನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೆ ದೇಶದ ಯೋಧರ ಪ್ರಾಣ ಉಳಿಯುತ್ತಿತ್ತು. ಎರಡು ಹೊತ್ತಿನ ಊಟದ ಗತಿಯಿಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಸಿಎಂ ದೇಶದ ಸೈನಿಕರಿಗೆ ಅವಮಾನ ಮಾಡಿದ್ದಾರೆ. ಸಿಎಂ ಸ್ಥಾನದಲ್ಲಿದ್ದುಕೊಂಡು ಐಟಿ ದಾಳಿ ಮಾಹಿತಿ ಸೋರಿಕೆ ಮಾಡಿ ಭ್ರಷ್ಟರ ಪರ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲ್ಲ ಎಂಬ ಎಚ್.ಡಿ. ರೇವಣ್ಣ ಹೇಳುತ್ತಾರೆ. ದೇವೇಗೌಡರ ಕುಟುಂಬ ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಅವರು ದೇಶದ ಘನತೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದಾರೆ. ದೇಶದ ರಕ್ಷಣೆ, ಅಂತಾರಾಷ್ಟ್ರೀಯ ಸಂಬಂಧ ವೃದ್ಧಿ, ಸೈನಿಕರಿಗೆ ಹೆಚ್ಚಿನ ಸೌಲಭ್ಯ ಹಾಗೂ ಆರ್ಥಿಕ ಸುಧಾರಣೆಯನ್ನು ಮಾಡಿದ್ದಾರೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ಈಗಾಗಲೇ ಸುರೇಶ ಅಂಗಡಿ ಅವರು ಗೆಲುವು ದಾಖಲಿಸಿದ್ದಾರೆ. ಆದರೆ, ಅಂತರ ಅಷ್ಟೇ ಗೊತ್ತಾಗಬೇಕಿದೆ ಎಂದರು.
ಕೃಷ್ಣೆಗೆ ಮಹಾ ನೀರು!
ಕೃಷ್ಣ ನದಿ ತೀರದಲ್ಲಿ ಬರಗಾಲ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‍ಗೆ ಮನವಿ ಸಲ್ಲಿಸಿದ್ದೇವೆ. ಕೃಷ್ಣಾ ನದಿಗೆ 4 ಟಿಎಂಸಿ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ನೀರು ಬಿಡಲು ಮುಂದಾದ ಮಹಾ ಸಿಎಂಗೆ ನಾನು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.