ಬೈಲಹೊಂಗಲ(ಬೆಳಗಾವಿ): ಅನೈತಿಕ ಸಂಬಂಧ ಹಿನ್ನೆಲೆ ಯುವಕನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನೇಗಿನಹಾಳ ಬಳಿಯಿರುವ ಹೊಸಕುರಗುಂದ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹೊಸ ಕುರಗುಂದ ಗ್ರಾಮದ ದ್ಯಾಮಪ್ಪ ನಾಗಪ್ಪ ವನ್ನೂರ (22) ಕೊಲೆಯಾದ ವ್ಯಕ್ತಿ. ಈತ ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿ ಕೊಲೆ ಮಾಡಿ ನಂತರ ಬೈಲಹೊಂಗಲ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎನ್ನಲಾಗಿದೆ.
22 ವರ್ಷ ಯುವಕ ಹಾಗೂ ಆರೋಪಿ ಪತ್ನಿಯ ಅನೈತಿಕ ಸಂಬಂಧ ತಿಳಿದ ಕುಟುಂಬಸ್ಥರು ಹಾಗೂ ಗ್ರಾಮದ ಹಿರಿಯರು ಈ ಹಿಂದೆ ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದ್ದರಂತೆ. ಆದರೆ ಪತ್ನಿ ಹಾಗೂ ಕೊಲೆಯಾದ ಯುವಕ ತಮ್ಮ ಹಳೇ ಚಾಳಿ ಮುಂದಯವರೆಸಿದ್ದರಿಂದ ರೊಚ್ಚಿಗೆದ್ದ ಗಂಡ, ಯುವಕನನ್ನು ಈ ಹಿಂದೆಯೂ ಕೊಲೆ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಹೀಗಾಗಿ ಕೊಲೆಯಾದ ಯುವಕ ಹಲವು ದಿನಗಳಿಂದ ಗ್ರಾಮಕ್ಕೆ ಬರದೇ ತಲೆಮೆರೆಸಿಕೊಂಡಿದ್ದನಂತೆ. ಈತ ಮರಳಿ ಗ್ರಾಮಕ್ಕೆ ಆಗಮಿಸಿರುವ ಸುದ್ದಿ ತಿಳಿದ ಆತ, ಮನೆಗೆ ತೆರಳಿ ಆತನ ಕಣ್ಣಿಗೆ ಖಾರದ ಪುಡಿ ಎರಚಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.