ಬೆಳಗಾವಿ: ಬಾಲಕನೋರ್ವ ನುಂಗಿದ್ದ 12 ಅಯಸ್ಕಾಂತೀಯ ಬಟನ್ ಹೊರ ತೆಗೆದು ಬಾಲಕನ ಜೀವ ಉಳಿಸುವಲ್ಲಿ ಬೆಳಗಾವಿಯ ಕೆಎಲ್ಇ ವೈದ್ಯರು ಯಶಸ್ವಿಯಾಗಿದ್ದಾರೆ.
ಹೌದು, ನೆರೆಯ ಗೋವಾ ರಾಜ್ಯದ 2 ವರ್ಷದ ಮಗುವೊಂದು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿತ್ತು. ಹೀಗಾಗಿ ಆತನ ಪಾಲಕರು ಬಾಲಕನನ್ನು ಗೋವಾದಿಂದ ಕೆಎಲ್‍ಇ ಆಸ್ಪತ್ರೆಗೆ ಕರೆ ತಂದಿದ್ದರು. ದೇಶಾದ್ಯಂತ ಲಾಕಡೌನ್ ಇರುವ ಪರಿಸ್ಥಿಯಲ್ಲಿ ಬಾಲಕನ ಚಿಕಿತ್ಸೆಗಾಗಿ ಪಾಲಕರು ಸುತ್ತಾಡಿ ಸುಸ್ತಾಗಿದ್ದರು. ಕೊನೆಗೆ ಗೋವಾದ ಜಿಲ್ಲಾಡಳಿತದ ಅನುಮತಿ ಪಡೆದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಆಗಮಿಸಿದ್ದರು.
ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕನ ಎಕ್ಸರೇ ತೆಗೆದು ನೋಡಿದಾಗ ಹೊಟ್ಟೆಯಲ್ಲಿ ಯಾವುದೋ ವಸ್ತು ಇರುವುದು ಪತ್ತೆಯಾಗಿದೆ. ಚಿಕಿತ್ಸೆ ನೇತೃತ್ವ ವಹಿಸಿದ್ದ ಮಕ್ಕಳ ತಜ್ಞ ಶಸ್ತ್ರ ಚಿಕಿತ್ಸಕ ಡಾ. ಸಂತೋಷ ಕುರಬೆಟ್ ಶಸ್ತ್ರ ಚಿಕಿತ್ಸೆ ನೆರವೇರಿಸಿ ಬಾಲಕ ನುಂಗಿದ್ದ ಇಂಗ್ಲೀಷ್ ಅಕ್ಷರ ಮಾಲೆಯ 12 ಅಯಸ್ಕಾಂತೀಯ ಬಟನ್ ಹೊರ ತೆಗೆದು ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದು, ಪಾಲಕರು ಸಂತಸಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ವೈದ್ಯ ಸಂತೋಷ ಕುರಬೆಟ್, ಲ್ಯಾಪ್ರೊಟಾಮಿ ಮೂಲಕ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಆಘಾತ ಎದುರಾಗಿತ್ತು. ಕಾರಣ ಬಾಲಕನ ಹೊಟ್ಟೆಯ ಸಣ್ಣ ಕರುಳಿನಲ್ಲಿ ಸುಮಾರು 5 ರಂಧ್ರಗಳು ಕಂಡು ಬಂದವು. ಒಂದೊಂದು ಅಯಸ್ಕಾಂತದ ಬಟನ್ ಬೇರೆ ಬೇರೆ ಜಾಗದಲ್ಲಿದ್ದರೂ ಕೂಡ ಅವುಗಳು ಒಂದಕ್ಕೊಂದು ಅಂಟಿಕೊಂಡು ಹೊಟ್ಟೆಯ ವಿವಿಧ ಭಾಗಗಳಲ್ಲಿ ರಂಧ್ರಗಳನ್ನು ಮಾಡಿದ್ದವು. 12 ಅಯಸ್ಕಾಂತಗಳನ್ನು ಹೊರ ತೆಗೆಯುವುದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರವಾಗಿತ್ತು. ಸುಮಾರು ಎರಡೂವರೆ ಗಂಟೆಗೂ ಅಧಿಕ ಸಮಯದವರೆಗೆ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ಅವುಗಳನ್ನು ಒಂದೊಂದಾಗಿ ಹೊಟ್ಟೆಯಿಂದ ಹೊರ ತೆಗೆಯಲಾಯಿತು. ಅಲ್ಲದೆ 3 ಕಡೆ ಹಾಳಾದ ಕರುಳನ್ನು ಮರು ಜೋಡಿಸಲಾಯಿತು. ಶಸ್ತ್ರ ಚಿಕಿತ್ಸೆಯ ನಂತರ 5ನೇ ದಿನಕ್ಕೆ ಹೊರಗಿನಿಂದ ಆಹಾರ ನೀಡಲು ಪ್ರಾರಂಭಿಸಿ ಕೇವಲ 7 ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಯಿತು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಈ ಮೊದಲು 4-6 ಅಯಸ್ಕಾಂತದ ಆಟದ ಬಟನ್‍ಗಳನ್ನು ನುಂಗಿದ್ದ ಪ್ರಕರಣಗಳಿದ್ದವು. ಆದರೆ ಪ್ರಥಮ ಬಾರಿಗೆ 12 ಅಯಸ್ಕಾಂತದ ಆಟದ ಬಟನ್‍ಗಳನ್ನು ನುಂಗಿದ ಪ್ರಕರಣ ಇದೇ ಮೊದಲು. ಎಲ್ಲಾ ಬಟನ್‍ಗಳನ್ನು ಸುರಕ್ಷಿತವಾಗಿ ಹೊರ ತೆಗೆಯುವುದಲ್ಲದೆ, ಹಾಳಾದ ಕರುಳನ್ನು ಜೋಡಿಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ವೈದ್ಯ ಡಾ. ಸಂತೋಷ ಕುರಬೆಟ ಯಶಸ್ವಿಯಾಗಿದ್ದಾರೆ. ಬಾಲಕನ ಪಾಲಕರು ವೈದ್ಯರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.