ಬೆಳಗಾವಿ: 75ನೇ ಜನ್ಮದಿನದ ಅಂಗವಾಗಿ ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಮಹಾರಾಷ್ಟ್ರದ ಬಾರ್ಸಿಯಲ್ಲಿರುವ ಕೆಎಲ್‍ಇ ಸಿಲ್ವರ್ ಜ್ಯೂಬ್ಲಿ ಹೈಸ್ಕೂಲಿನಲ್ಲಿ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ ನೆರವೇರಿಸಲಾಯಿತು.
ಸಮಾರಂಭದಲ್ಲಿ ತುಲಾಭಾರ ಸ್ವೀಕರಿಸಿ ಮಾತನಾಡಿದ ಡಾ.ಪ್ರಭಾಕರ ಕೋರೆ, ಹಿತೈಷಿಗಳು ಹಾಗೂ ವಿದ್ಯಾರ್ಥಿಗಳ ಪ್ರೀತಿಗೆ ಬೆಲೆ ಕಟ್ಟಲಾಗದು. ಹಿರಿಯರ ಪುಣ್ಯದ ಫಲವಾಗಿ ನಾನು ಜೀವನದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಯಿತು. ಕೆಎಲ್‍ಇ ಸಪ್ತರ್ಷಿಗಳ ಕನಸುಗಳಿಗೆ ಪಥವಾಗಿ ಮುನ್ನಡೆಯಲು ನನಗೆ ಎಲ್ಲರೂ ಜೊತೆಯಾಗಿದ್ದಾರೆ. ಒಬ್ಬ ವ್ಯಕ್ತಿ ಸಾಧನೆಯನ್ನು ಮಾಡಬೇಕಾದರೆ ಅದರ ಹಿಂದೆ ಗುರು ಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಮುಖ್ಯ. ನನ್ನ ಬದುಕಿನಲ್ಲಿ ಹಿರಿಯರ ಆಶೀರ್ವಾದವನ್ನು ನಾನೆಂದೂ ಗೌರವಾದರಗಳಿಂದ ಸ್ವೀಕರಿಸುತ್ತೇನೆ ಎಂದರು.
ವಿದ್ಯಾರ್ಥಿಗಳಾದ ನೀವು ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ. ಇಂದು ನಮ್ಮ ಕೆಎಲ್‍ಇ ಸಂಸ್ಥೆ ಉತ್ತಮವಾದ ಶಿಕ್ಷಣ-ಆರೋಗ್ಯ ಹಾಗೂ ಸಂಶೋಧನೆಗಾಗಿ ಸಾಕಷ್ಟು ಮುತುವರ್ಜಿ ವಹಿಸಿ ಕಾರ್ಯವನ್ನು ನಿರ್ವಹಿಸುತ್ತಿದೆ. ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇಲ್ಲಿ ನೀಡಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯುವ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಬೇಕು. ಭವಿಷ್ಯದಲ್ಲಿ ಸಮಾಜಕ್ಕೆ ಹಾಗೂ ದೇಶಕ್ಕೆ ಅದ್ವಿತೀಯವಾದ ಕೊಡುಗೆ ನೀಡುವಂತಾಗಬೇಕು ಎಂದು ಕರೆ ಕೊಟ್ಟರು.