ಬೆಳಗಾವಿ: ನವೆಂಬರ್ 23ರಂದು ಬೆಳಗಾವಿಯ ಭಾಗ್ಯನಗರದಲ್ಲಿ ಮೊಬೈಲ್ ಟವರ್ ನಿರ್ಮಿಸಲು ಅನುಮತಿ ಸಂಬಂಧ ಬಿಜೆಪಿ ನಗರ ಸೇವಕ ಹಾಗೂ ಸ್ಥಳೀಯರ ನಡುವಿನ ಗಲಾಟೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ನಿನ್ನೆ ತಡರಾತ್ರಿ ನಗರ ಸೇವಕ ಅಭಿಜಿತ್ ಜವಳಕರ್ರನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿಜಿತ್ ಜವಳಕರ್ ಅವರನ್ನು ಬಂಧಿಸಿರುವ ಟಿಳಕವಾಡಿ ಠಾಣೆ ಪೊಲೀಸರು ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ. ನಿನ್ನೆಯಷ್ಟೇ ಪಾಲಿಕೆ ಸದಸ್ಯ ಅಭಿಜಿತ್ ಬಂಧಿಸುವಂತೆ ಎಂಇಎಸ್ ಕಾರ್ಯಕರ್ತರು ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ಬೆನ್ನಲ್ಲೇ ರಾತ್ರೋರಾತ್ರಿ ಬಂಧಿಸಲಾಗಿದೆ. ಬಂಧನ ಖಂಡಿಸಿ ಬಿಮ್ಸ್ ಆಸ್ಪತ್ರೆ ಎದುರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಟವರ್ ವಿಚಾರವಾಗಿ ನಗರ ಸೇವಕ ಅಭಿಜಿತ್ ಜವಳಕರ್ ಮತ್ತು ಸ್ಥಳೀಯ ನಿವಾಸಿ ರಮೇಶ್ ಪಾಟೀಲ್ ಮಧ್ಯೆ ಗಲಾಟೆ ನಡೆದಿತ್ತು. ಬಳಿಕ ಇಬ್ಬರೂ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ನೀಡಿದ್ದರು. ತಮ್ಮ ಮೇಲೆ ಹಲ್ಲೆ ಮಾಡಿರುವ ರಮೇಶ್ ಪಾಟೀಲ್ ಬಂಧಿಸುವಂತೆ ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಬಿಜೆಪಿ ನಗರಸೇವಕರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಗೆ ಮಣಿದು ಪೊಲೀಸರು ರಮೇಶ್ ಪಾಟೀಲ್ರನ್ನು ಬಂಧಿಸಿದ್ದರು. ಇದಾದ ನಂತರ ನಿನ್ನೆ ಸಂಜೆ ಎಂಇಎಸ್ ಕಾರ್ಯಕರ್ತರು ನಗರಸೇವಕ ಅಭಿಜಿತ್ ಜವಳಕರ್ ಬಂಧಿಸುವಂತೆ ಪ್ರತಿಭಟನೆ ಮಾಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಗರ ಸೇವಕನನ್ನು ರಾತ್ರೋರಾತ್ರಿ ಬಂಧಿಸಲಾಗಿದೆ.
ಬಿಜೆಪಿ ನಿಯೋಗದಿಂದ ಆಯುಕ್ತರ ಭೇಟಿ: ನಗರ ಸೇವಕನ ಬಂಧನ ಖಂಡಿಸಿ ಸೋಮವಾರ ಬಿಜೆಪಿ ನಿಯೋಗವು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಬಿಜೆಪಿ ಸದಸ್ಯನನ್ನು ಬಂಧಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಮನವಿ ಸಲ್ಲಿಸಿದ ಬಳಿಕ ಬಿಜೆಪಿ ಮಹಾನಗರ ಅಧ್ಯಕ್ಷ ಅನಿಲ ಬೆನಕೆ ಮಾತನಾಡಿ, ''ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡುವ ಉದ್ದೇಶ ಕಾಂಗ್ರೆಸ್ ಹಾಗೂ ಎಂಇಎಸ್ ಮುಖಂಡರಿಗಿದೆ. ಆ ಕಾರಣಕ್ಕೆ ಬಿಜೆಪಿ ನಗರಸೇವಕರನ್ನು ಹೆದರಿಸುವ ತಂತ್ರ ಮಾಡುತ್ತಿದ್ದಾರೆ. ಈ ಕಾರಣಕ್ಕೆ ನಮ್ಮ ಸದಸ್ಯ ಅಭಿಜಿತ್ ಜವಳಕರ್ ಅವರನ್ನು ಬಂಧಿಸಲಾಗಿದೆ. ಅವರು ಡಿಸ್ಚಾರ್ಜ್ ಕೂಡ ಆಗಿಲ್ಲ, ಆಸ್ಪತ್ರೆಯ ಬಿಲ್ ಕೂಡ ಪಾವತಿಸಿರಲಿಲ್ಲ. ಪೊಲೀಸರು ರಾತ್ರೋರಾತ್ರಿ ಆಸ್ಪತ್ರೆಯಿಂದಲೇ ಬಂಧಿಸಿದ್ದಾರೆ. ಈ ಕಾರಣಕ್ಕೆ ನಾವು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ನಮ್ಮ ಸದಸ್ಯನ ಬಂಧಿಸಿದ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕೆಂಬ ಬೇಡಿಕೆ ನಮ್ಮದಾಗಿತ್ತು. ಆದರೆ ಕಮೀಷನರ್ ನಮ್ಮ ಮನವಿಗೆ ಸ್ಪಂದಿಸಿಲ್ಲ, ಭೇಟಿಯಾಗಿ ಚರ್ಚಿಸಿದ್ದು ನಮಗೆ ತೃಪ್ತಿ ತಂದಿಲ್ಲ. ಹೀಗಾಗಿ ಕೋರ್ ಕಮಿಟಿ ಮೀಟಿಂಗ್ ನಡೆಸಿ, ನಾವು ಹೋರಾಟಕ್ಕೆ ಸಿದ್ಧರಾಗುತ್ತೇವೆ'' ಎಂದು ಎಚ್ಚರಿಸಿದ್ದಾರೆ.
''ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕ ಸೇರಿ ಕಾಂಗ್ರೆಸ್ ನಾಯಕರ ಅಣತಿಯಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಅಭಿಜಿತ್ ಸಲ್ಲಿಸಿದ ದೂರು, ಸಾಕ್ಷ್ಯ ಆಧರಿಸಿ ಈ ಮೊದಲು ರಮೇಶ್ ಪಾಟೀಲ ಬಂಧಿಸಲಾಗಿತ್ತು. ಅದೇ ದಿನ ಅಭಿಜಿತ್ ಜವಳಕರ್ ಬಂಧಿಸಬೇಕಿತ್ತು, ಆದರೆ ಮೂರು ದಿನವೇಕೆ ಕಾದರು. ಕಾಂಗ್ರೆಸ್ ಬೆದರಿಕೆಗೆ ನಾವು ಹೆದರಲ್ಲ, ಸರ್ಕಾರದ ವಿರುದ್ಧ ಹೋರಾಡುತ್ತೇವೆ. ಮೇಯರ್ ಅವರನ್ನು ಅಪಮಾನಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ'' ಎಂದು ಅನಿಲ ಬೆನಕೆ ಆರೋಪಿಸಿದರು.
ಆಯುಕ್ತರ ಪ್ರತಿಕ್ರಿಯೆ: ಆಸ್ಪತ್ರೆಯಿಂದಲೇ ನಗರ ಸೇವಕನನ್ನು ಬಂಧಿಸಲಾಗಿದೆ ಎಂಬ ಬಿಜೆಪಿ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಈ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಮಾತನಾಡಿ, ''ಕೂಲಂಕಷವಾಗಿ ವಿಚಾರಣೆ ನಡೆಸಿರುವ ತನಿಖಾಧಿಕಾರಿ ನ್ಯಾಯಸಮ್ಮತವಾಗಿ ತನಿಖೆ ಮಾಡಿ, ಇಬ್ಬರ ನಡುವೆ ಹೊಡೆದಾಟ ಆಗಿದ್ದರಿಂದ ಇಬ್ಬರ ಮೇಲೂ ಕ್ರಮ ಕೈಗೊಂಡಿದ್ದಾರೆ. ನಮ್ಮ ಪೊಲೀಸರ ಮೇಲೆ ಯಾರ ಒತ್ತಡವೂ ಇಲ್ಲ. ಸುಳ್ಳು ದೂರು ಕೊಟ್ಟಿದ್ದಾರೆ ಎಂಬ ಆರೋಪದ ಬಗ್ಗೆ ಟಿಳಕವಾಡಿ ಸಿಪಿಐ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಖಡೇಬಜಾರ್ ಎಸಿಪಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರ ಕಲೆ ಹಾಕುತ್ತಿದ್ದಾರೆ. 12 ಗಂಟೆಗೆ ಆಸ್ಪತ್ರೆಯಿಂದ ನಗರ ಸೇವಕ ಡಿಸ್ಚಾರ್ಜ್ ಆಗಿರುವ ಕುರಿತು ನಮ್ಮಲ್ಲಿ ದಾಖಲೆ ಇದೆ. ಮೇಯರ್ಗೆ ಅಪಮಾನ ಮಾಡಿಲ್ಲ. ಒಳಗೆ ಕರೆದು ಆತಿಥ್ಯ ನೀಡಿದ್ದೇವೆ'' ಎಂದು ಸ್ಪಷ್ಟಪಡಿಸಿದರು.
ಓದಿ: ಬೆಳಗಾವಿ: ಅಪಾಯಕಾರಿ ಟ್ರಾನ್ಸ್‌ಫಾರ್ಮರ್ ವೈರ್ಗಳನ್ನು ಸರಿಪಡಿಸುವಂತೆ ಹೆಸ್ಕಾಂಗೆ ಒತ್ತಾಯ