ಬೆಳಗಾವಿ: ''ಬಿಜೆಪಿ ವರಿಷ್ಠರು ಮೊದಲೇ ಯತ್ನಾಳ್ ಅವರನ್ನು ಕರೆಸಿ ಮಾತಾಡಿದ್ದರೆ ಅವರು ಈ ರೀತಿ ಮಾತಾಡುತ್ತಿರಲಿಲ್ಲ. ಸಮಯಾವಕಾಶ ಕೊಡದೇ ಇದ್ದುದರಿಂದ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಷ್ಟಕ್ಕೆ ಅವರು ಯಾರದೋ ವಿರುದ್ಧ ಇದ್ದಾರೆ ಎನ್ನುವುದು ಸರಿಯಲ್ಲ'' ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ''ಬಸನಗೌಡ ಪಾಟೀಲ ಯತ್ನಾಳ್ ಮೀಸಲಾತಿ ಹೋರಾಟದಲ್ಲಿ ಗುರುತಿಸಿಕೊಂಡ ಕಾರಣಕ್ಕೆ ಅವರಿಗೆ ಏನು ಹಿನ್ನಡೆಯಾಗುತ್ತಿದೆ. ಹಿಂದೆ ಮಂತ್ರಿ ಆಗ್ತಾರೆ ಅಂದ್ರೆ ಆಗಲಿಲ್ಲ. ಆ ಬಳಿಕ ವಿರೋಧ ಪಕ್ಷದ ನಾಯಕ ಸ್ಥಾನವೂ ಸಿಗಲಿಲ್ಲ. ಹಾಗಾಗಿ ಮೀಸಲಾತಿ ಹೋರಾಟದಿಂದ ಅವರಿಗೆ ಅನ್ಯಾಯ ಆಗುತ್ತಿದೆ ಎಂಬ ಸಂದೇಶ ಹೋಗಿದೆ. ಅದನ್ನು ಬಿಜೆಪಿ ವರಿಷ್ಠರು ಸರಿಪಡಿಸಲಿ. ನಾವು ಯಾವುದೇ ಸ್ಥಾನಮಾನ ಕೇಳುತ್ತಿಲ್ಲ. ಆದರೆ, ಯತ್ನಾಳ್ ಅವರನ್ನು ಬಿಜೆಪಿಯವರು ನಿರ್ಲಕ್ಷಿಸುತ್ತಿದ್ದಾರೆ. ಅವರ ಹಿರಿತನಕ್ಕೆ ತಕ್ಕಂತೆ ನಡೆಸಿಕೊಳ್ಳುತ್ತಿಲ್ಲ'' ಎಂದು ಆರೋಪಿಸಿದರು.
''ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಭಾಗಿಯಾದ ಬಹುತೇಕರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅದೇ ರೀತಿ ಹೋರಾಟಕ್ಕೆ ಅನ್ಯಾಯ ಮತ್ತು ಹಿನ್ನಡೆ ಮಾಡಿದವರ ವಿರುದ್ಧ ನಮ್ಮ ಸಮಾಜದ ಜನ ಅಸಮಾಧಾನಗೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇನ್ನು ಪಂಚಮಸಾಲಿ ನಾಯಕರ ನಾಯಕತ್ವವನ್ನು ಕುಗ್ಗಿಸುವ ಕೆಲಸ ಯಾವುದೇ ಪಕ್ಷ ಮಾಡಿದರೆ, ಅದನ್ನು ಸಮಾಜ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಹಾಗಾಗಿ, ಬಿಜೆಪಿ ಪಕ್ಷದ ವರಿಷ್ಠರು ಇದಕ್ಕೆಲ್ಲಾ ತೆರೆ ಎಳೆದು, ಮುಕ್ತವಾಗಿ ಮಾತುಕತೆಗೆ ಮುಂದಾಗಬೇಕು. ಈ ರೀತಿ ತೇಜೋವಧೆ ಮಾಡುವ ಕುತಂತ್ರಕ್ಕೆ ಕಡಿವಾಣ ಹಾಕಬೇಕು'' ಎಂದು ಆಗ್ರಹಿಸಿದರು.
''ಕಾಂತರಾಜ ವರದಿ ವಿರುದ್ಧ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದೇ ನಾನು. ನಮ್ಮ ಗುರುಗಳಾದ ಸುತ್ತೂರು ಶ್ರೀಗಳು ದಾವಣಗೆರೆಯ ಅಧಿವೇಶನದಲ್ಲೂ ವಿರೋಧಿಸಿ, ಆ ವರದಿ ತಿರಸ್ಕರಿಸಬೇಕು. ಮತ್ತು ಹೊಸದಾಗಿ ಜನಗಣತಿ ಮಾಡುವಂತೆ ಹೇಳಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಸುತ್ತೂರು ಶ್ರೀಗಳ ಹೇಳಿಕೆಗೆ ನನ್ನ ಸಹಮತವಿದ್ದು, ಅವರು ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧ'' ಎಂದರು.
''ನಿಮ್ಮ ಮಾತಿನ ಮೇಲಿನ ನಂಬಿಕೆ ಮತ್ತು ನಮ್ಮ ಶಾಸಕರ ಮನವಿ ಮೇರೆಗೆ ಅಧಿವೇಶನ ವೇಳೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ಮುಂದೂಡಿದ್ದೇವೆ. ಹಾಗಾಗಿ 2ಎ ಮೀಸಲಾತಿ ವಿಚಾರದಲ್ಲಿ ಕೂಡಲೇ ಕಾನೂನು ಪ್ರಕ್ರಿಯೆ ಆರಂಭಿಸಬೇಕು. ಇಲ್ಲದಿದ್ದರೆ, ಜ.14 ರಂದು ನಾವೆಲ್ಲಾ ಕೂಡಲಸಂಗಮದಲ್ಲಿ ಸಭೆ ಸೇರಿ ಮುಂದಿನ ಹೋರಾಟ ರೂಪಿಸಿ, ಬೆಂಗಳೂರು ಇಲ್ಲವೇ ದಾವಣಗೆರೆಯಲ್ಲಿ ಮತ್ತೊಮ್ಮೆ ಶಕ್ತಿ ಪ್ರದರ್ಶನ ಮಾಡಲಿದ್ದೇವೆ. ಅದೇ ರೀತಿ ದಾವಣಗೆರೆಯಲ್ಲಿ ಇದೇ 9ನೇ ತಾರೀಖು ಲಿಂಗಾಯತ ಒಳಪಂಗಡಗಳ ಸಮಾವೇಶಕ್ಕೂ ತಯಾರಿ ನಡೆಸಿದ್ದೇವೆ. ಈ ವೇಳೆ ಒಬಿಸಿ ಮೀಸಲಾತಿ ಬಗ್ಗೆ ಕೇಂದ್ರದ ಮೇಲೆ ಯಾವ ರೀತಿ ಒತ್ತಡ ಹೇರಬೇಕೆಂದು ನಿರ್ಧರಿಸುತ್ತೇವೆ'' ಎಂದು ಸ್ವಾಮೀಜಿ ಹೇಳಿದರು.
ಮಾಜಿ ಶಾಸಕ ಶಿವಶಂಕರ, ಪದಾಧಿಕಾರಿಗಳಾದ ಬಸನಗೌಡ ಪಾಟೀಲ, ಆರ್.ಕೆ. ಪಾಟೀಲ, ನಿಂಗಪ್ಪ ಪಿರೋಜಿ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಬಾಲರಾಮನ ವಿಗ್ರಹ ಶಿಲೆ, ಶಿಲ್ಪಿ ನಮ್ಮ ಕರುನಾಡಿನ ಹೆಮ್ಮೆ: ಸುಬುಧೇಂದ್ರ ಶ್ರೀ