ಚಿಕ್ಕೋಡಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತವರಿಗೆ ಟಿಕೆಟ್ ಕೊಡುವುದೋ ಅಥವಾ ಅನರ್ಹ ಶಾಸಕರಿಗೆ ಟಿಕೆಟ್ ಕೊಡುವುದೋ ಎಂಬ ಗೊಂದಲ ಈ ಬಾರಿ ಬಿಜೆಪಿ ನಾಯಕರಲ್ಲಿ ಮೂಡಿದೆ.
ಕಾಗವಾಡ ಮತಕ್ಷೇತ್ರದಲ್ಲಿ ಮಾಜಿ ಶಾಸಕ ರಾಜು ಕಾಗೆ, ಅನರ್ಹ ಶಾಸಕ ಶ್ರೀಮಂತ ಪಾಟೀಲ ಹಾಗೂ ಅವರ ಪುತ್ರ ಶ್ರೀನಿವಾಸ ಪಾಟೀಲರ ನಡುವೆ ಟಿಕೆಟ್ಗಾಗಿ ಕಾಳಗ ನಡೆಯುತ್ತಿದೆ. ಹೈಕಮಾಂಡ್ ಈ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡುತ್ತದೆಯೋ ಗೊತ್ತಿಲ್ಲ. ಆದರೆ, ಯಾರಿಗೆ ಟಿಕೆಟ್ ಸಿಕ್ಕರೇ ಗೆಲ್ತಾರೆ ಅನ್ನೋ ಬಗ್ಗೆ ಮತಕ್ಷೇತ್ರದಲ್ಲಿ ಜೋರಾದ ಚರ್ಚೆಗಳಾಗುತ್ತಿವೆ.
ಈಗಾಗಲೇ ರಾಜು ಕಾಗೆ ಅಭಿಮಾನಿಗಳು ತಮ್ಮ ನಾಯಕನಿಗೆ ಟಿಕೆಟ್ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಅದರಂತೆ ಉಪ ಚುನಾವಣೆಗಾಗಿ ರಾಜು ಕಾಗೆ ಮತಕ್ಷೇತ್ರದ ತುಂಬಾ ತಯಾರಿ ಆರಂಭಿಸಿದ್ದಾರೆ. ಒಂದು ಪಕ್ಷ ಅನರ್ಹ ಶಾಸಕ ಶ್ರೀಮಂತ ಪಾಟೀಲ ಅಥವಾ ಅವರ ಪುತ್ರ ಶ್ರೀನಿವಾಸ ಪಾಟೀಲರಿಗೆ ಬಿಜೆಪಿ ಟಿಕೆಟ್ ನೀಡಿದ್ರೆ, ಕಾಗೆ ಕಾಂಗ್ರೆಸ್ ಸೇರ್ಪಡೆಯಾಗಬಹುದು ಇಲ್ಲವೇ ಬಂಡಾಯ ಏಳುತ್ತಾರೆ ಎನ್ನುವ ಮಾತುಗಳೂ ಈಗ ಕೇಳಿ ಬರುತ್ತಿವೆ.
ಮಂಗಳವಾರ ಅಭಿಮಾನಿಗಳ ಸಭೆ ಕರೆದ ರಾಜು ಕಾಗೆ:
ಮಂಗಳವಾರ ಬೆಳಗ್ಗೆ 10 ಗಂಟೆಗೆ ನೀಲಾಂಬಿಕಾ ಕಾರ್ಯಾಲಯಕ್ಕೆ ಬಂದು ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ರಾಜು ಕಾಗೆ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಕಡೆ ಮುಖ ಮಾಡಿದ್ರೇ ಹೇಗೆ ಎಂಬುದರ ಬಗ್ಗೆಯೂ ಕಾಗೆ ತಮ್ಮ ಬೆಂಬಲಿಗರ ಜತೆಗೆ ಚರ್ಚೆ ನಡೆಸಲಿದ್ದಾರೆ. ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದಿದ್ದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಈ ಬಾರಿ ಕಾರ್ಯಕರ್ತರನ್ನು ಕೇಳಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ರಾಜು ಕಾಗೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದೆ ಇದ್ದರೆ, ಬಂಡಾಯವಾಗಿ ನಿಲ್ಲುವ ಕುರಿತು ನಾಳೆಯ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಅದರಂತೆ ಈಗಾಗಲೇ ಕಾಗವಾಡ ಉಪ ಚುನಾವಣೆಗೆ ಕಾಂಗ್ರೆಸ್ನಿಂದ ಒಟ್ಟು ಐದು ಜನರು ನಾಮಪತ್ರ ಸಲ್ಲಿಸಿದ್ದಾರೆ. ಚಂದ್ರಕಾಂತ ಬಸಪ್ಪ ಇಮ್ಮಡಿ, ರವೀಂದ್ರ ಗಾಣಿಗೇರ, ಬಾಬಾಸಾಬ್ ಸಿಂಧೆ, ದಿಗ್ವಿಜಯ ಪವಾರದೇಸಾಯಿ, ಓಂ ಪ್ರಕಾಶರಾವ್ ಪಾಟೀಲ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದಲ್ಲದೇ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಒಂದು ವೇಳೆ ರಾಜು ಕಾಗೆ ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಇದ್ದರೆ ಅವರು ಕೂಡಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.