ಬೆಳಗಾವಿ: ಪ್ರವಾಹದ ಸೆಳೆತಕ್ಕೆ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ. ಜಿಲ್ಲಾಡಳಿತ, ತಾಲೂಕಾಡಳಿತಗಳು ಎಷ್ಟೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೂ ಜನರ ನಿರ್ಲಕ್ಷ್ಯದಿಂದ ಪ್ರಾಣ ಹಾನಿಗಳಾಗುತ್ತಿವೆ.
ನಗರದ ಬಳ್ಳಾರಿ ನಾಲಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ರಭಸವಾಗಿ ಹರಿಯುತ್ತಿದ್ದ ಬಳ್ಳಾರಿ ನಾಲಾ ನೀರಿನಲ್ಲಿ ರಸ್ತೆ ದಾಟುವಾಗ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ನೀರಿನ ರಭಸಕ್ಕೆ ಬೈಕ್ ಸವಾರ ಕೊಚ್ಚಿಹೋಗಿದ್ದಾನೆ. ಇಬ್ಬರು ಸವಾರರ ಪೈಕಿ ಓರ್ವ ಕೊಚ್ಚಿಕೊಂಡು ಹೋದರೆ ಮತ್ತೋರ್ವ ಪಾರಾಗಿದ್ದಾನೆ.
ಶಾಸಕಿ ಮುಂದೆ ಕಣ್ಣೀರಿಟ್ಟ ವೃದ್ಧ :
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರಾಜಹಂಸಗಡ ಗ್ರಾಮಕ್ಕೆ ಭೇಟಿ ನೀಡಿದರು. ಮನೆ ಹಾಗೂ ಜಮೀನು ಕಳೆದುಕೊಂಡಿರುವ ರೈತರೊಬ್ಬರು ಲಕ್ಷ್ಮಿ ಹೆಬ್ಬಾಳ್ಕರ್ ಹೋಗುತ್ತಿದ್ದಂತೆ ಕೈ ಮುಗಿದು ನಮ್ಮನ್ನ ಕೈಬಿಡಬೇಡಿ ಬದುಕಿಸಿ ಎಂದು ಕಣ್ಣೀರಿಟ್ಟ ಮನಕಲಕುವ ದೃಶ್ಯ ಕಂಡುಬಂತು. ವೃದ್ದರ ಕಣ್ಣೀರು ನೋಡಿ ಭಾವುಕರಾದ ಶಾಸಕಿ ಹೆಬ್ಬಾಳ್ಕರ್, ಅಳಬೇಡಿ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಸಮಾಧಾನ ಪಡಿಸಿದರು.