ಬೆಳಗಾವಿ: ಸಕ್ಕರೆ, ಈರುಳ್ಳಿ ರಫ್ತು ಮಾಡಲು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ್ದು, ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೊಬ್ಬರಿ ಧಾರಣೆ ಕುಸಿತವಾಗಿದೆ. ನಿರ್ಯಾತ ಮತ್ತು ಆಯಾತದಿಂದ ದೇಶಕ್ಕೆ ದೊಡ್ಡ ಹಾನಿ ಆಗುತ್ತೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇಥೆನಾಲ್ ಉತ್ಪಾದನೆ ಮಾಡುವವರಿಗೆ ಕೇಂದ್ರ ಸರ್ಕಾರ ಮೊದಲು ಪ್ರೋತ್ಸಾಹ ನೀಡಿದೆ. ಆದರೆ, ಈಗ ನೇರವಾಗಿ ಇಥೆನಾಲ್ ಉತ್ಪಾದನೆ ಮಾಡದಂತೆ ನಿರ್ದೇಶನ ಮಾಡಿದೆ. ಜ್ಯೂಸ್ ಉಪಯೋಗ ಮಾಡಬೇಕೆಂದು ಆದೇಶ ಮಾಡಿಲ್ಲ. ಬಂಡವಾಳ ಶಾಹಿಗಳು ಇಥೆನಾಲ್ ಉತ್ಪಾದನೆ ಮಾಡಬೇಕೆಂದು 300, 400, 500 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಅವರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.
ಸಕ್ಕರೆ ಕಾರ್ಖಾನೆಯಲ್ಲಿ ತೂಕದ ಯಂತ್ರ ಅಳವಡಿಸುವ ವಿಚಾರಕ್ಕೆ ಎಲ್ಲ ಕಾರ್ಖಾನೆಗಳು ಅನ್ಲಾಗ್ ಮೋಡ್ನಿಂದ ಇಲೆಕ್ಟ್ರಾನಿಕ್ ಮೋಡ್ಗೆ ಪರಿವರ್ತನೆ ಆಗಬೇಕು. ದೂರು ಕೇಳಿ ಬಂದಿರುವ ಕಾರ್ಖಾನೆಗಳು ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕಬ್ಬು ಕಳುಹಿಸುವ ಮೊದಲು ರೈತರು ನಮ್ಮ ಎಪಿಎಂಸಿಯಲ್ಲಿ ಉಚಿತವಾಗಿ ತೂಕ ಮಾಡಿಸಿಕೊಳ್ಳಲು ಇಂದು ಆದೇಶ ಮಾಡಲಾಗುತ್ತಿದೆ. ಇದರಿಂದ ಕಾರ್ಖಾನೆಯಲ್ಲಿ ಏನಾದರೂ ತೂಕದ ವ್ಯತ್ಯಾಸ ಕಂಡು ಬಂದರೆ ಗೊತ್ತಾಗುತ್ತೆ. ರಾಜ್ಯದಲ್ಲಿ 167 ಎಪಿಸಿಎಂಸಿಗಳು ಇವೆ. ರೈತರಿಗೆ ಸಂಶಯ ಇದ್ದರೆ ಅಲ್ಲಿ ಹೋಗಿ ತೂಕ ಮಾಡಿಸಬಹುದು. ತೂಕದಲ್ಲಿ ಮೋಸ ಕಂಡು ಬಂದರೆ ಅಂಥ ಕಾರ್ಖಾನೆ ವಿರುದ್ಧ ದೂರು ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದರು.
ಈ ಬಾರಿ ಇಳುವರಿ ಕಡಿಮೆ: ಈ ಬಾರಿ ಮಳೆ ಕೊರತೆಯಿಂದಾಗಿ ಒಂದೂವರೇ ಲಕ್ಷ ಮೆಟ್ರಿಕ್ ಟನ್ ಇಳುವರಿ ಕಡಿಮೆ ಆಗಹುದು. ಪ್ರತಿವರ್ಷ 6.50 ಲಕ್ಷ ಟನ್ದಿಂದ 7 ಲಕ್ಷ ಮೆಟ್ರಿಕ್ ಟನ್ ಆಗುತ್ತಿತ್ತು. ಈಗಾಗಲೇ 3 ಲಕ್ಷ ಮ್ಯಾಟ್ರಿಕ್ ಟನ್ ಕಬ್ಬು ನುರಿಸಲಾಗಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದರು.
ಎಪಿಎಂಸಿ ಕಾಯ್ದೆ ಹಿಂಪಡೆಯುವ ಯೋಚನೆ ಮಾಡುತ್ತಿದ್ದೀರಾ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಯೋಚನೆ ಇಲ್ಲ, ಮಾಡುತ್ತೇವೆ. ವಿಧಾಸಭೆಯಲ್ಲಿ ಬಿಲ್ ಪಾಸ್ ಆಗಿದೆ. ಆದರೆ ಪರಿಷತ್ನಲ್ಲಿ ಬಹುಮತ ಕೊರತೆ ಇರೋದ್ರಿಂದ ಸಮಸ್ಯೆ ಆಗಿದೆ. ಆಯ್ಕೆ ಸಮಿತಿಗೆ ಹೋದಾಗ 10 ಮತಗಳು ಕಡಿಮೆ ಬಂದವು. ಈಗ ಪರಿಷತ್ತಿನಲ್ಲಿ ಬಹುಮತ ಸಿಕ್ಕಿದೆ. ಪರಿಷತ್ ಎಲ್ಲ ಸದಸ್ಯರ ಸಲಹೆ ಪಡೆದು ಒಮ್ಮತದಿಂದ ರಾಜ್ಯದಲ್ಲಿ ಪುನರ್ ಎಪಿಎಂಸಿ ಸ್ಥಾಪಿಸಿ ಕಾಯ್ದೆ ಜಾರಿಗೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಬಿ.ಆರ್ ಪಾಟೀಲ ಅಸಮಾಧಾನದ ಬಗ್ಗೆ ಮಾತನಾಡಿ, ಯಾರೋ ಎಲ್ಲಿಯೋ ವೈಯಕ್ತಿಕವಾಗಿ ಹೇಳಿದ್ದನ್ನು ಕೇಳಿದ್ರೆ ಹೇಗೆ? ನಾನು ಏನು ಹೇಳಲಿ. ಅವರು ನಮ್ಮ ಶಾಸಕರು ನಿಜ ಆದರೆ, ಅವರು ನನ್ನ ಮುಂದೆ ಎಂದೂ ಆ ರೀತಿ ಹೇಳಿಲ್ಲ. ನನ್ನ ಇಲಾಖೆಯಲ್ಲಿ ಅವರ ಕೆಲಸ ಮಾಡಲು ನಾನು ರೆಡಿ ಇದ್ದೇನೆ ಎಂದರು.
ಸಭೆಗೆ ಹೋಗ್ತೇನೆ: ದಾವಣಗೆರೆಯಲ್ಲಿ ನಡೆಯಲಿರುವ ವೀರಶೈವ ಮಹಾಸಭೆ ಅಧಿವೇಶನಕ್ಕೆ ಹೋಗ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ವೀರಶೈವರಾಗಿರುವಾಗ ಅಧಿವೇಶನಕ್ಕೆ ಹೋಗಲೇಬೇಕು. ನನಗೂ ಆಹ್ವಾನವಿದೆ ಎಂದ ಅವರು, ಎಂಬಿ ಪಾಟೀಲರಿಗೆ ಆಹ್ವಾನ ಇರಲಿಲ್ಲ ಎಂಬ ಮಾತಿಗೆ ನೀವು ಅವರನ್ನೇ ಕೇಳಿ ಎಂದರು.
ಲೈಲಾ ಶುಗರ್ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ತನಿಖೆ ಮಾಡುವಂತೆ ಆದೇಶ ಮಾಡಿದೆ. ನಿವೃತ್ತ ನ್ಯಾಯಾಧೀಶರು ತನಿಖೆ ಮಾಡ್ತಿದ್ದಾರೆ. ತನಿಖೆ ಮುಗಿದ ಮೇಲೆ ಏನಾಗುತ್ತೆ ನೋಡೋಣ. ಇನ್ನು ಎಂಕೆ ಹುಬ್ಬಳ್ಳಿ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಕಳ್ಳತನ ಆಗಿರುವ ಬಗ್ಗೆ ನಾನು ಸಚಿವನಾದ ಬಳಿಕ ದೂರು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಇನ್ನು ಬಹಳಷ್ಟು ಸಹಕಾರಿ ಕಾರ್ಖಾನೆಗಳಲ್ಲಿ ದೂರು ಕೇಳಿ ಬಂದಿವೆ. ಹಾಗಾಗಿ, ಯಾವ ರೀತಿ ದುಡ್ಡು ಖರ್ಚು ಮಾಡಬೇಕು ಮತ್ತು ದುಡ್ಡಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಈ ಹಂಗಾಮು ಮುಗಿದ ಬಳಿಕ ಒಂದು ನಿಯಮ ರೂಪಿಸುತ್ತೇವೆ ಎಂದರು.
ಇದನ್ನೂ ಓದಿ: ಕಾಲುವೆ,ಕೆರೆ, ಜಲಾಶಯಗಳಿಂದ ಒದಗಿಸುವ ನೀರಿಗೆ ಪ್ರತಿ ಎಂಸಿಎಫ್ಟಿಗೆ 3 ಲಕ್ಷ ರೂ. ರಾಜಧನ ನಿಗದಿ