ಬೆಳಗಾವಿ: ನಿಪ್ಪಾಣಿ ನಗರಸಭೆ ಕಟ್ಟಡದ ಮೇಲಿನ ಭಗವಾ ಧ್ವಜ ತೆರವುಗೊಳಿಸುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಅಳವಡಿಕೆಗೆ ಎಂಇಎಸ್ ತಕರಾರು ಮಾಡ್ತಿದೆ. ಜಿಲ್ಲೆಯಲ್ಲಿ ಓರ್ವ ಡಿಸಿಎಂ, ನಾಲ್ವರು ಸಚಿವರು, ಘಟಾನುಘಟಿ ಶಾಸಕರಿದ್ದಾರೆ. ಗಡಿ ಕ್ಯಾತೆ ತೆಗೆಯುವ ಉದ್ಧವ್ ಠಾಕ್ರೆಗೆ ಕೇವಲ ಹೇಳಿಕೆ ಉತ್ತರ ಕೊಡಲಾಗುತ್ತಿದೆ. ಮೊದಲು ನಿಮ್ಮ ಜಿಲ್ಲೆಯಲ್ಲಿ ಎಲ್ಲಾ ಸರಿ ಇದೆಯಾ? ನೋಡಿಕೊಳ್ಳಿ. ನಿಪ್ಪಾಣಿ ನಗರಸಭೆ ಮೇಲಿನ ಧ್ವಜ ತೆರವುಗೊಳಿಸಲು ನಿಮಗೆ ತಾಕತ್ ಇದೆಯೋ ಇಲ್ವೋ? ಕನ್ನಡ ನಾಡು, ನೆಲ, ಜಲದ ಮೇಲೆ ಅಭಿಮಾನ ಇದ್ರೆ ನಿಪ್ಪಾಣಿ ನಗರಸಭೆ ಮೇಲಿನ ಭಗವಾ ಧ್ವಜ ತೆರವುಗೊಳಿಸಿ ಎಂದು ಆಗ್ರಹಿಸಿದ್ದಾರೆ.
ಓದಿ: ಮಂಗನ ಕಾಯಿಲೆ ನಿಯಂತ್ರಣ ಕೋರಿ ಪಿಐಎಲ್: ಅಗತ್ಯ ಕ್ರಮಕ್ಕೆ ಹೈಕೋರ್ಟ್ ಆದೇಶ
ನಾಡದ್ರೋಹಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಎಂಇಎಸ್ಅನ್ನು ತಾಕತ್ ಇದ್ರೆ ಕರ್ನಾಟಕದಲ್ಲಿ ಬ್ಯಾನ್ ಮಾಡಿ ಎಂದು ಸವಾಲು ಹಾಕಿರುವ ಅವರು, ಎಂಇಎಸ್ ನಿಷೇಧದ ಠರಾವು ವಿಧಾನಸಭೆ ಅಧಿವೇಶನದಲ್ಲಿ ಪಾಸ್ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೆ ನಿಪ್ಪಾಣಿ ನಗರಸಭೆ ಮೇಲೆ ಹಾರಾಡುವ ಧ್ವಜದ ಬಗ್ಗೆ ಆರ್‌ಟಿಐನಡಿ ಮಾಹಿತಿ ಕೇಳಿ ಅರ್ಜಿಯನ್ನೂ ಸಲ್ಲಿಸಿದ್ದಾರೆ.