ಅಥಣಿ: ಬಹುವರ್ಷಗಳ ಬೇಡಿಕೆಯಾದ ಶೇಡಬಾಳ-ಅಥಣಿ-ವಿಜಯಪುರ ಹೊಸ ರೈಲು ಮಾರ್ಗ ಮಂಜೂರಾತಿಗಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿಗೆ ಭಾರತೀಯ ಕಿಸಾನ್ ಸಂಘದಿಂದ ಮನವಿ ಸಲ್ಲಿಸಲಾಯಿತು.
ಅಥಣಿ ಆರ್ಟಿಓ ಕಚೇರಿ ಉದ್ಘಾಟನೆಗೆ ಬರಬೇಕಿದ್ದ ರೈಲ್ವೆ ಖಾತೆ, ರಾಜ್ಯ ಸಚಿವ ಶ್ರೀ ಸುರೇಶ ಅಂಗಡಿ ಅವರು ಕಾರಣಾಂತರಗಳಿಂದ ಗೈರಾಗಿದ್ದು, ಈ ವೇಳೆ ನೀಡಬೇಕಿದ್ದ ಮನವಿ ಪತ್ರವನ್ನು ಪೋಸ್ಟ್ ಮುಖಾಂತರ ಕಳುಹಿಸಲಾಗಿದೆ. 'ಈಟಿವಿ ಭಾರತ' ಮೂಲಕ ಅಥಣಿಯ ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಶ್ರೀಶೈಲ ಜನಗೌಡ ಅವರು ಸಚಿವರಿಗೆ ಈ ಕುರಿತು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಶ್ರೀಶೈಲ ಜನಗೌಡ, ಉತ್ತರ ಕರ್ನಾಟಕ ಭಾಗದ ಜನರಿಗೆ 70 ವರ್ಷಗಳಿಂದ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಅಥಣಿ ಭಾಗದ ಜನರ ಬೇಡಿಕೆಯಾಗಿರುವ ಶೇಡಬಾಳ-ಅಥಣಿ-ವಿಜಯಪುರ ರೈಲು ಯೋಜನೆ ಅನುಷ್ಠಾನಕ್ಕೆ ತಾಲೂಕಿನ ಜನತೆ ಕಾದು ನೋಡುತ್ತಿದ್ದಾರೆ. ಶೀಘ್ರದಲ್ಲಿ ಈ ರೈಲು ಮಾರ್ಗಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಅಥಣಿ ತಾಲೂಕಿನ ಸುತ್ತಮುತ್ತ ಸಕ್ಕರೆ ಕಾರ್ಖಾನೆಗಳು, ಕೃಷಿ ಚಟುವಟಿಕೆ ವ್ಯವಹಾರ ಹಾಗೂ ಐತಿಹಾಸಿಕ ದೇವಾಲಯಗಳು ಇರುವುದರಿಂದ, ಸುರೇಶ್ ಅಂಗಡಿಯವರು ತುರ್ತು ಸಭೆ ನಡೆಸಿ ವಿಜಯಪುರ-ಅಥಣಿ-ಮೀರಜ್ ಮಾರ್ಗದ ರೈಲನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ಸಾರ್ವಜನಿಕರ ಪರವಾಗಿ ಆಗ್ರಹಿಸುತ್ತೇನೆ ಎಂದು ತಿಳಿಸಿದರು.