ಬೆಳಗಾವಿ: ಭಾರತ ಹುಣ್ಣಿಮೆ ಅಂಗವಾಗಿ ಯಲ್ಲಮ್ಮನಗುಡ್ಡದ ರೇಣುಕಾದೇವಿ ಜಾತ್ರೆ ನಡೆಯಲಿದ್ದು, ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರ ದಂಡು ಹರಿದುಬರಲಿದೆ.
ಚಕ್ಕಡಿಗಳಲ್ಲಿ ಭಕ್ತರು: ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ದೊಡ್ಡ ಜಾತ್ರೆ. ಈ ಜಾತ್ರೆಗೆ ಲಕ್ಷಾಂತರ ಭಕ್ತರು ವಾಹನಗಳ ಜತೆಗೆ ಚಕ್ಕಡಿಗಳಲ್ಲೂ ಬರುತ್ತಾರೆ. ಈಗಾಗಲೇ ಸವದತ್ತಿಗೆ ಬಂದಿರುವ ಭಕ್ತರು ಜೋಗುಳಬಾವಿ ಬಳಿ, ಮಲಪ್ರಭಾ ನದಿ ದಂಡೆ ಹಾಗೂ ಯಲ್ಲಮ್ಮನಗುಡ್ಡದಲ್ಲಿರುವ ವಿಶಾಲವಾದ ಜಾಗದಲ್ಲಿ ಬಿಡಾರ ಹೂಡಿದ್ದಾರೆ. 'ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ' ಎಂಬ ಜೈಕಾರ ಮುಗಿಲು ಮುಟ್ಟಿದೆ.
ಸಿಂಗಾರಗೊಂಡ ಅಂಗಡಿಗಳು: ಅಂಗಡಿ–ಮುಂಗಟ್ಟುಗಳು ಸಿಂಗಾರಗೊಂಡಿವೆ. ಕುಂಕುಮ ಭಂಡಾರ, ಕಾಯಿ, ಕರ್ಪೂರ, ಬಾಳೆಹಣ್ಣು, ಸೀರೆ–ಕುಪ್ಪಸ, ಮಿಠಾಯಿ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆ ಇದೆ. ಭಾರತ ಹುಣ್ಣಿಮೆಗೆ ಬರುವ ಪ್ರತಿಯೊಬ್ಬ ಮಹಿಳೆ ಹಸಿರು ಬಳೆ ಧರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಹಾಗಾಗಿ ನಾನಾ ವಿನ್ಯಾಸಗಳ ಬಳೆಗಳ ಅಂಗಡಿಗಳು ತೆರೆದಿವೆ.
ಬ್ಯಾರಿಕೇಡ್ ಅಳವಡಿಕೆ: ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಜೋಗುಳಬಾವಿ ಹಾಗೂ ನೂಲಿನ ಗಿರಣಿ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. 52 ಸಿಸಿಟಿವಿ ಕ್ಯಾಮರಾಗಳನ್ನು ಸುಸ್ಥಿತಿಯಲ್ಲಿ ಇಡಲಾಗಿದೆ.
'ಜಾತ್ರೆಗೆ ಆಗಮಿಸುವ ಭಕ್ತರಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ವಸತಿ, ಶೌಚಗೃಹ ಮತ್ತಿತರ ಮೂಲಸೌಕರ್ಯ ಒದಗಿಸಲಾಗುವುದು' ಎಂದು ಯಲ್ಲಮ್ಮ ದೇವಿ ದೇವಸ್ಥಾನದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿದರು.
ಇದನ್ನೂ ಓದಿ: ಇಂದು ಕಾಲೇಜು ಆರಂಭ: ಉಡುಪಿಯಲ್ಲಿ 700ಕ್ಕೂ ಹೆಚ್ಚು ಪೊಲೀಸರ ನಿಯೋಜನೆ