ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪರ ಸಂಘಟನೆಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆಗಳಲ್ಲಿ ಬೆಳ್ಳಂಬೆಳಗ್ಗೆ ರಸ್ತೆಗಿಳಿದಿರುವ ರೈತರು ಹಾಗೂ ವಿವಿಧ ಸಂಘಟನೆಗಳು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಣ್ಣೆನಗರಿ ದಾವಣಗೆರೆಯಲ್ಲಿ ರೈತ ಸಂಘಟನೆಗಳು ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ನಗರದ ಜಯದೇವ ಸರ್ಕಲ್‌ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ಸದಸ್ಯರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತರಕಾರಿ ಸುರಿದು ಆಕ್ರೋಶ:
ರೈತ ಸಂಘ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದ ಬಣದ ಕಾರ್ಯಕರ್ತರು ರಸ್ತೆಗೆ ತರಕಾರಿ ಸುರಿದು ಪ್ರತಿಭಟನೆ ನಡೆಸಿದರು. ರೈತರ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಕಿಡಿಕಾರಿದರು. ಬಂದ್ ಹಿನ್ನೆಲೆ ಬಸ್ ನಿಲ್ದಾಣಕ್ಕೆ ಆಗಮಿಸಿದ ರೈತ ಹಾಗೂ ಕಾರ್ಮಿಕ ಸಂಘಟನೆಗಳು, ಪ್ರಯಾಣಿಕರು ಬಂದ್‌ಗೆ ಬೆಂಬಲಿಸುವಂತೆ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಮನವಿ ಮಾಡಿದರು.
ಧಾರವಾಡದಲ್ಲಿ ಬಸ್ ಎದುರು ಮಲಗಿ ರೈತನಿಂದ ಆಕ್ರೋಶ:
ಧಾರವಾಡದಲ್ಲಿ ರೈತನೊಬ್ಬ ಬಸ್‌ಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದರು. ಎಂದಿನಂತೆ ಸಂಚಾರ ಆರಂಭಿಸಿರುವ ಬಸ್ ಸೇವೆ ಬಂದ್ ಮಾಡುವಂತೆ ಒತ್ತಾಯಿಸಿದರು. ಧಾರವಾಡ ಜ್ಯುಬಿಲಿ ಸರ್ಕಲ್‌ನಲ್ಲಿ ಬಸ್ ತಡೆದ ಬಸ್ ರೈತ ಮುಖಂಡ ನಿಂಗಪ್ಪಾ ಲಿಗಾಡೆ, ಬೇಕಾದರೆ ನಮ್ಮ ಮೇಲೆ ಹಾಯಿಸಿಕೊಂಡು ಹೋಗಿ. ಆದರೆ, ಬಸ್ ಆರಂಭ ಮಾಡದೆ, ರೈತರಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿಕೊಂಡರು. ಧಾರವಾಡದ ಜ್ಯುಬಿಲಿ ಸರ್ಕಲ್‌ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಚಾಮರಾಜನಗರದಲ್ಲಿ ರಸ್ತೆಗಿಳಿದ ರೈತರು:
ಚಾಮರಾಜನಗರದಲ್ಲಿ ಭಾರತ್ ಬಂದ್ ಬೆಂಬಲಿಸಿ ರೈತರು ಸೇರಿದಂತೆ ಹಲವು ಸಂಘಟನೆಗಳು ನಗರದಲ್ಲಿ ಬೆಳಗ್ಗೆಯೇ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ರೈತ ಸಂಘ, ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಗೆ ಎಸ್ಡಿಪಿಐ, ಬಿಎಸ್ಪಿ, ಕನ್ನಡಪರ ಸಂಘಟನೆಗಳ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಪೊಲೀಸರ ಎದುರೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಭುವನೇಶ್ವರಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಾರಿಗೆ ಸಂಸ್ಥೆ ನಿಲ್ದಾಣ ಮುಂಭಾಗವು ರೈತರು ಧರಣಿ ನಡೆಸುತ್ತಿದ್ದು, ತಾಲೂಕು ಕೇಂದ್ರಗಳಲ್ಲೂ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾರಿಗೆ ಬಸ್ ಸಂಚಾರ: ಬಂದ್ ನಡುವೆಯು ಕರ್ನಾಟಕ, ತಮಿಳುನಾಡು ಸಾರಿಗೆ ಸಂಸ್ಥೆ ಬಸ್ ಗಳು ಸಂಚರಿಸುತ್ತಿವೆ. ಹಾಲು, ದಿನ ಪತ್ರಿಕೆ ಅಂಗಡಿಗಳು ತೆರೆದಿವೆ, ತರಕಾರಿ ಮಾರುಕಟ್ಟೆಗೆ ವಿರಳ ಜನರು ಬರುತ್ತಿದ್ದಾರೆ.
ಬೆಳಗಾವಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ರೈತರ ಆಕ್ರೋಶ:
ಬೆಳಗಾವಿಯ ಬಸ್ ನಿಲ್ದಾಣದ ಎದುರು ಟೈರ್‌ಗೆ ಬೆಂಕಿ ಹಚ್ಚಿ ರೈತರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ರೈತ ಮುಖಂಡ ಸಿದಗೌಡ ಮೋದಗಿ ಒತ್ತಾಯಪೂರ್ವಕವಾಗಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸುವಂತೆ ಸಾರಿಗೆ ಸಿಬ್ಬಂದಿಗೆ ಆಗ್ರಹಿಸಿದರು. ಬಸ್ ಚಾಲಕನಿಗೆ ತರಾಟೆ ತೆಗೆದುಕೊಂಡ ಸಿದ್ದಗೌಡ ಮೊದಗಿ, ಏನೇ ಅನಾಹುತ ಆದರೂ ನೀವೆ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದರು. ರೈತರು ಒತ್ತಾಯಪೂರ್ವಕವಾಗಿ ಬಸ್ ಸಂಚಾರಕ್ಕೆ ಅಡೆತಡೆ ಮಾಡುತ್ತಿದ್ದರೂ ಪೊಲೀಸರು ಮಾತ್ರ ಸ್ಥಳಕ್ಕೆ ಬಂದಿಲ್ಲ.
ಕುಂದಾನಗರಿ ಬೆಳಗಾವಿಯಲ್ಲಿ ಎಂದಿನಂತೆ ಬಸ್‌ಗಳ ಸಂಚಾರ ಇದೆ. ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುತ್ತಿದ್ದು, ಬೆಳಗಾವಿ ನಗರದಿಂದ ತಾಲೂಕು ಕೇಂದ್ರಗಳಿಗೆ ಬಸ್‌ಗಳು ಸಂಚರಿಸುತ್ತಿವೆ. ಭಾರತ್ ಬಂದ್‌ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿ ರೈತ ಸಂಘಟನೆಗಳ ಬೆಂಬಲಿಸುವೆ. ಹಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ನೀಡಿವೆ.
ರಾಮನಗರದಲ್ಲಿ ಕರ್ನಾಟಕ ಜನಪರ ವೇದಿಕೆಯಿಂದ ಆಕ್ರೋಶ:
ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಮನಗರದಲ್ಲೂ ಮುಂಜಾನೆಯಿಂದಲೇ ಪ್ರತಿಭಟನೆ ಪ್ರಾರಂಭವಾಗಿದೆ. ಜಿಲ್ಲೆಯ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಬಂದ್ ಬೆಂಬಲಿಸಿ ಪ್ರತಿಭಟಿಸಿದರು.
ಚನ್ನಪಟ್ಟಣದ ಕಾವೇರಿ ವೃತ್ತದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ನೀತಿ ಖಂಡಿಸಿದರು.
ಇದನ್ನೂ ಓದಿ: ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತರಿಂದ ಭಾರತ್ ಬಂದ್: ಏನಿರುತ್ತೆ.. ಏನಿರಲ್ಲ?