ಬೆಳಗಾವಿ: ರಾಷ್ಟ್ರೀಯ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಪುಣೆ - ಬೆಂಗಳೂರು ಹೆದ್ದಾರಿ ತಡೆಯಲು ಯತ್ನಿಸಿದ ಕಾಂಗ್ರೆಸ್ ಕಿಸಾನ್ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ಜಾರಿ ವಿರೋಧಿಸಿ ದೇಶಾದ್ಯಂತ ಇಂದು ಬಂದ್ ಕರೆ ನೀಡಲಾಗಿದ್ದು, ಕಾಂಗ್ರೆಸ್ ಕೂಡ ಬೆಂಬಲ ಸೂಚಿಸಿದೆ. ಬೆಳಗ್ಗೆ ಹಿರೇಬಾಗೇವಾಡಿ ಟೂಲ್ ಬಳಿ ಹೆದ್ದಾರಿ ತಡೆಯಲು ಕೈ ಕಾರ್ಯಕರ್ತರು ಮುಂದಾದರು. ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆ ಹೆದ್ದಾರಿ ಮೇಲೆ ಕುಳಿತು ಬೊಬ್ಬೆ ಹೊಡೆದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಮನವೊಲಿಕೆಗೆ ಜಗ್ಗದ ಕೈ ಕಾರ್ಯಕರ್ತರನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ವಶಕ್ಕೆ ಪಡೆದರು. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬೆಳಗಾವಿಯಲ್ಲಿ ಬಂದ್ ನೀರಸ:
ಕುಂದಾನಗರಿ ಬೆಳಗಾವಿಯಲ್ಲಿ ಭಾರತ್ ಬಂದ್ ವಿಫಲವಾಗಿದೆ. ಕೇವಲ ಪ್ರತಿಭಟನೆಗೆ ಮಾತ್ರ ಭಾರತ ಬಂದ್ ಸಿಮಿತವಾದಂತೆ ಕಂಡು ಬಂದಿತು. ಬೆಳಗಾವಿ ಎಪಿಎಂಸಿಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಬಸ್ ನಿಲ್ದಾಣ ಎದುರು ಕೆಲವೇ ಕೆಲವು ರೈತ ಸಂಘಟನೆ, ಕನ್ನಡ ಸಂಘಟನೆ ಮುಖಂಡರ ಪ್ರತಿಭಟನೆ ನಡೆಸಿದ್ದು, ಬೆಳಗಾವಿಯಲ್ಲಿ ಎಂದಿನಂತೆ ಜನಜೀವನ ಆರಂಭಗೊಂಡಿದೆ. ಬೆಳಗ್ಗೆ 10 ಗಂಟೆ ವೇಳೆ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆಗೆ ರೈತ ಸಂಘಟನೆಗಳು ನಿರ್ಧರಿಸಿವೆ.
ಇದನ್ನೂ ಓದಿ: ಮೆಜೆಸ್ಟಿಕ್ನಲ್ಲಿ ಎಂದಿನಂತೆ ರಸ್ತೆಗಿಳಿದ ಬಸ್ಗಳು: ಅಡ್ಡಿಪಡಿಸಿದವರನ್ನ ವಶಕ್ಕೆ ಪಡೆದ ಪೊಲೀಸರು