ಬೆಳಗಾವಿ: ವಿಶ್ವಕಪ್ ಸೆಮಿಫೈನಲ್ ಟೂರ್ನಿಯಲ್ಲಿಂದು ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದು, ಬೆಳಗಾವಿಯ ಕ್ರೀಡಾಭಿಮಾನಿಗಳು ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಸತತ 9 ಪಂದ್ಯಗಳನ್ನು ಗೆದ್ದು ಬೀಗಿರುವ ಭಾರತ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ವಾಂಖೆಡೆ ಮೈದಾನದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ನಮ್ಮ ತಂಡ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಸರ್ದಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ರೋಹಿತ್ ಶರ್ಮಾ ತಂಡಕ್ಕೆ ಚೀಯರ್ ಅಪ್ ಹೇಳಿದ್ದು, ಈ ಸಲ ವಿಶ್ವಕಪ್ ನಮ್ಮದೇ ಎಂದು ಘೋಷಣೆ ಕೂಗಿ ಶುಭ ಹಾರೈಸಿದ್ದಾರೆ. ವಿದ್ಯಾರ್ಥಿನಿ ಅಸ್ಮಿತಾ ಪಾಟೀಲ ಮಾತನಾಡಿ, ಸತತ 9 ಮ್ಯಾಚ್ ಗೆದ್ದಿರುವ ನಮ್ಮ ತಂಡಕ್ಕೆ ಈ ಮ್ಯಾಚ್ ಗೆಲ್ಲೋದು ಏನು ಕಷ್ಟವಲ್ಲ. ಇನ್ನು ನಮ್ಮ ಫೆವರೇಟ್ ಪ್ಲೇಯರ್ ವಿರಾಟ ಕೊಹ್ಲಿ 50ನೇ ಸೆಂಚೂರಿ ಹೊಡೆದು ಸಚಿನ್ ದಾಖಲೆ ಮುರಿಯಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಶೈಲೇಶ ಸಿಂಗೆನ್ನವರ ಮಾತನಾಡಿ, ಹಿಂದಿನ ವಿಶ್ವಕಪ್ ಸೋಲಿನ ಸೇಡನ್ನು ಈ ಸಲ ನಮ್ಮ ಭಾರತ ತಂಡ ತೀರಿಸುತ್ತದೆ. ಕೊಹ್ಲಿ, ರೋಹಿತ್, ಗಿಲ್, ಶ್ರೇಯಸ್, ಶಮಿ ಸೇರಿ ಎಲ್ಲರೂ ಅತ್ಯುತ್ತಮ ಆಟಗಾರರಿದ್ದು, ಪಕ್ಕಾ ನಾವು ಗೆದ್ದೇ ಗೆಲ್ಲುತ್ತೇವೆ ಎಂದರು.
ಉಪನ್ಯಾಸಕ ಆಜಿನಾಥ ಪಾಟೀಲ ಮಾತನಾಡಿ, ಹಿಂದಿನ ವಿಶ್ವಕಪ್ನಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ನಮ್ಮ ಭಾರತ ಪರಾಭವಗೊಂಡಿತ್ತು. ಆದರೆ, ಈ ಬಾರಿಗೆ ಹಾಗೆ ಆಗಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್ ಅಪ್ ತುಂಬಾ ಚೆನ್ನಾಗಿರೋದ್ರಿಂದ ನೂರಕ್ಕೆ ನೂರಷ್ಟು ಭಾರತ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗಡಿಜಿಲ್ಲೆ ಕ್ರಿಕೆಟ್ ಪ್ರೇಮಿಗಳಿಂದ ಶುಭಾಶಯ: ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರಯ ಅಜೇಯ ಓಟ ಮುಂದುವರೆಸಿ, ಸೋಲಿನ ಸೇಡು ತೀರಿಸಿಕೊಳ್ಳಬೇಕು ಎಂದು ಗಡಿ ಜಿಲ್ಲೆ ಚಾಮರಾಜನಗರದ ಕ್ರಿಕೆಟ್ ಪ್ರೇಮಿಗಳು ಶುಭಾಶಯ ಮಹಾಪೂರವನ್ನೇ ಹರಿಸಿದ್ದಾರೆ. ಭಾರತ ತಂಡ ಈಗ ಬಲಿಷ್ಠವಾಗಿದ್ದು, ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ಕೊಡುತ್ತಿದೆ. ಹವಾಮಾನವೂ ಕೂಡ ಉತ್ತಮವಾಗಿದ್ದು, ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದೇ ಗೆಲ್ಲಲ್ಲಿದೆ ಎಂದಿದ್ದಾರೆ.
ಇಂದಿನ ಸೆಮಿಫೈನಲ್ನಲ್ಲಿ ಭಾರತ ಗೆಲ್ಲಲಿ ಎಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ಥಳೀಯ ಕ್ರಿಕೆಟ್ ಪ್ರೇಮಿಗಳು ಅಗ್ರಹಾರ ವೃತ್ತದಲ್ಲಿರುವ ನೂರೊಂದು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಪಂದ್ಯಕ್ಕಾಗಿ ಇಡೀ ದೇಶವೇ ಕುತೂಹಲದಿಂದ ನೋಡುತ್ತಿದೆ. ಇಂದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ, ಫೈನಲ್ ಪ್ರವೇಶಿಸಲಿ ಎಂದು ದೇವಾಲಯದಲ್ಲಿ ಭಾರತದ ಕ್ರೀಡಾಪಟುಗಳ ಭಾವಚಿತ್ರ ಹಿಡಿದು, ವಿಶೇಷ ಪೂಜೆ ನೆರವೇರಿಸಿದರು.
ಗಂಗಾವತಿಯಲ್ಲಿ ವಿಶೇಷ ಪೂಜೆ: ಭಾರತ ತಂಡ ಸೆಮಿಫೈನಲ್ ತಲುಪಿದ್ದು, ಫೈನಲ್ ಪಂದ್ಯದಲ್ಲೂ ಜಯಶಾಲಿಯಾಗಬೇಕು ಎಂದು ಪ್ರಾರ್ಥಿಸಿ ಇಲ್ಲಿನ ದೇಗುಲದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಮಾಡಿದರು. ಪಂಪಾನಗರದ ಪಂಪಾಪತಿ ದೇವಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭಾಗವಹಿಸಿ ಭಾರತ ತಂಡದ ಗೆಲುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ವಿಶ್ವಕಪ್ ಯಾತ್ರೆಯಲ್ಲಿ ಭಾರತ ತಂಡ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಜೈತ್ರಯಾತ್ರೆ ಪೂರ್ಣ ಮಾಡಿದೆ. ಇದೀಗ ಸೆಮಿಫೈನಲ್ನಲ್ಲಿ ಗೆಲುವು ದಾಖಲಿಸಿ ಫೈನಲ್ಗೆ ಬರಲಿದೆ ಎಂಬ ವಿಶ್ವಾಸವಿದೆ. ಭಾರತ ತಂಡ ಇದೀಗ ಅತ್ಯಂತ ಶಕ್ತಿಶಾಲಿಯಾಗಿದ್ದು, ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಎಲ್ಲ ಅವಕಾಶಗಳಿವೆ. ಭಾರತ ಕೇವಲ ಕ್ರಿಕೆಟ್ನಲ್ಲಿ ಮಾತ್ರವಲ್ಲ, ಎಲ್ಲಾ ರಂಗದಲ್ಲೂ ಸಾಧನೆ ಮಾಡುತ್ತಿದೆ. ಟೀಂ ಇಂಡಿಯಾಗೆ ಶುಭವಾಗಲಿದೆ ಎಂದರು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್: ಭಾರತ-ನ್ಯೂಜಿಲೆಂಡ್ ಫೈಟ್, ಮಳೆಯಾದರೆ ಹೇಗೆ?