ಬೆಳಗಾವಿ: ರೈತನನ್ನು ಬಾಯಿ ಚಪಲಕ್ಕೆ ಮಾತ್ರ ಹಾಡಿ ಹೊಗಳುವ ಜನಪ್ರತಿನಿಧಿಗಳಿಂದಲೇ ಇಂದು ಫಲವತ್ತಾದ ಕೃಷಿ ಜಮೀನುಗಳು ಉಳ್ಳವರ ಹಾಗೂ ಕೈಗಾರಿಕಾ ಪ್ರದೇಶಗಳಾಗಿ ಮಾರ್ಪಡಾಗುತ್ತಿವೆ.
ಹೌದು, ಬೆಳಗಾವಿ ತಾಲೂಕಿನ ಹೊರವಲಯದಲ್ಲಿರುವ ಹಲಗಾ ಗ್ರಾಮದ 19 ಎಕರೆ ಕೃಷಿ ಭೂಮಿಯಲ್ಲಿ ಸರ್ಕಾರ ಕಳೆದ 10 ವರ್ಷಗಳ ಹಿಂದೆ ಒಳಚರಂಡಿ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣಕ್ಕೆ ರೈತರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಕೃಷಿ ಭೂಮಿಗೆ ಪ್ರತಿ ಎಕರೆಗೆ ಕೇವಲ 3 ಲಕ್ಷ ರೂ.ಗಳನ್ನು ನಿಗದಿ ಮಾಡಿ ಕೆಲಸ ಆರಂಭಿಸಿದ್ದರು. ಆಗ ರೈತರೆಲ್ಲರೂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ, ರೈತರ ಬೆನ್ನೆಲುಬಾಗಿ ಬಂದ ಈಗಿನ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಳೆದ ಒಂದೂವರೆ ವರ್ಷದ ಹಿಂದೆ ಸರ್ಕಾರದ ವಿರುದ್ಧವೇ ಹೋರಾಟ ಮಾಡಿ ಕೃಷಿ ಜಮೀನಿನಲ್ಲಿ ಕೈಗೊಂಡ ಒಳಚರಂಡಿ ಘಟಕ ನಿರ್ಮಾಣ ಕಾರ್ಯ ಸ್ಥಗಿತವಾಗುವಂತೆ ಮಾಡಿದ್ದರು.
ಆದರೀಗ ಮತ್ತೆ ಪೊಲೀಸರ ಭದ್ರತೆಯಲ್ಲಿ ಬೆಳೆದ ಬೆಳೆಯ ಮಧ್ಯದಲ್ಲಿಯೇ ಜೆಸಿಬಿಗಳು ಘರ್ಜನೆ ಮಾಡುತ್ತಿದ್ದರೂ, ಶಾಸಕಿ ಇತ್ತ ಸುಳಿಯದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸುದ್ದಿಗೋಷ್ಠಿಯೊಂದರಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರೈತರಪರವಾಗಿ ನಿಲ್ಲುವುದಾಗಿ ಹೇಳುವ ಮೂಲಕ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದು, ಇದರೊಂದಿಗೆ ಜಿಲ್ಲೆಯ ಯಾವೊಬ್ಬ ನಾಯಕರು ರೈತರ ಬೆನ್ನಿಗೆ ನಿಲ್ಲದೇ ಕಣ್ಮುಚ್ಚಿ ಕುಳಿತಿದ್ದಾರೆ. ಎಕರೆ ಕೇವಲ 3 ಲಕ್ಷ ರೂ.ಗಳ ಹಣ ನಿಗದಿ ಮಾಡಿರುವ ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೇಂದ್ರ ಸಚಿವ, ಡಿಸಿಎಂ ಸೇರಿ ಐವರು ಸಚಿವರಿದ್ದು ಎಲ್ಲರೂ ಘಟಾನುಘಟಿ ನಾಯಕರೇ ಆಗಿದ್ದಾರೆ. ಆದ್ರೆ, ರೈತರ ಪರವಾಗಿ ನಿಲ್ಲುತ್ತಿಲ್ಲ ಎಂದು ರೈತ ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯ ವಿವರ: 2010ರಲ್ಲಿ 19ಎಕರೆ ಜಮೀನಿನಲ್ಲಿ ಶುದ್ದೀಕರಣ ಘಟಕಕ್ಕೆ ಸರ್ಕಾರ ಕೃಷಿ ಭೂಮಿಯನ್ನ ಭೂಸ್ವಾಧೀನ ಮಾಡಿಕೊಂಡಿತ್ತು. ಆಗ ರೈತರು ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾದೀನ ಪಡಿಸಿಕೊಂಡಿದೆಯಾದರೂ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕೃಷಿ ಜಮೀನಿಗೆ ಪ್ರತಿ ಎಕರೆಗೆ ಭೂಮಿಗೆ ಕೇವಲ 3ಲಕ್ಷ ರೂ.ಗಳನ್ನು ನೀಡಲು ಮುಂದಾಗುತ್ತದೆ. ಇದರಿಂದ ಕಂಗಾಲಾದ 40 ಜನ ರೈತರು ಕೃಷಿ ಜಮೀನನ್ನ ಉಳಿಸಿಕೊಳ್ಳಲು ಇಂದಿನವರೆಗೂ ಕಾನೂನು ಹೋರಾಟ ಮಾಡುತ್ತಿದ್ದಾರೆ. ಆದರೆ, ಅಂದು ರೈತಪರವಾಗಿ ಧ್ವನಿ ಎತ್ತುವ ಮೂಲಕ ರೈತ ಹೋರಾಟಕ್ಕೆ ಬೆಂಬಲವಾಗಿದ್ದ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಈದೀಗ ಮೌನವಾಗಿದ್ದು, ಕುಂಟು ನೆಪಗಳನ್ನು ಮುಂದಿಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಅಂದು ನಿಂತಿದ್ದ ಎಸ್‌ಟಿಪಿ ಘಟಕದ ಕಾಮಗಾರಿ ಇಂದು ಪೊಲೀಸರ ಭದ್ರತೆಯಲ್ಲಿ ಮತ್ತೆ ಆರಂಭಗೊಂಡಿದೆ. ಲಕ್ಷ ಗಟ್ಟಲೇ ಬಂಡವಾಳ ಹಾಕಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಈಗಷ್ಟೇ ಮೊಳೆಕೆಯೊಡೆಯುತ್ತಿದೆ. ಆದರೆ, ಸರ್ಕಾರ ಬೆಳೆಗಳನ್ನು ನಾಶಪಡಿಸಿ ಕಾಮಗಾರಿ ಮುಂದುವರೆಸಿದೆ.