ಚಿಕ್ಕೋಡಿ(ಬೆಳಗಾವಿ): ಚುನಾವಣೆ ಸಮೀಪಿಸುತ್ತಿದ್ದಂತೆ ಸೂಕ್ತ ದಾಖಲೆ ಇಲ್ಲದೆ ಹಣ, ಮದ್ಯ ಸಾಗಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ರಾತ್ರಿ ಮತ್ತೆ ನಿಪ್ಪಾಣಿ ಪೊಲೀಸರು 1.5 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನಳ್ಳಿ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಾಸಗಿ ಬಸ್ ಮೂಲಕ ಸಾಗಿಸುತ್ತಿದ್ದ 1.5 ಕೋಟಿ ರೂ ಹಣ ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರದ ಮುಂಬೈ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಪರಿಶೀಲನೆ ನಡೆಸಿದಾಗ ಈ ಹಣ ಪತ್ತೆಯಾಗಿದೆ. ಹೆಚ್ಚಿನ ತನಿಖೆಗಾಗಿ ಹಣದ ಜೊತೆಗೆ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ 12 ಗಂಟೆ ಆಸುಪಾಸಿನಲ್ಲಿ ನಿಪ್ಪಾಣಿ ತಾಲೂಕಿನ ಕೊಗನಳ್ಳಿ ಚೆಕ್ ಪೋಸ್ಟ್ ನಲ್ಲಿ ಮುಂಬೈನಿಂದ ಬರುತ್ತಿದ್ದ ಖಾಸಗಿ ಬಸ್ ಒಂದರಲ್ಲಿ ದಾಖಲೆ ಇಲ್ಲದ 1.5 ಕೋಟಿ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿಪ್ಪಾಣಿ ಪೊಲೀಸರ ಕಾರ್ಯಾಚರಣೆ ಬಗ್ಗೆ ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವಿಜಯಪುರ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 4ರವರೆಗೆ ಜಿಲ್ಲೆಯಲ್ಲಿ ವಿವಿಧೆಡೆ ದಾಳಿ ನಡೆಸಿ 14,28,472 ರೂ. ಮೌಲ್ಯದ ಅಬಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತರು ತಿಳಿಸಿದ್ದಾರೆ. ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಅಬಕಾರಿ ಇಲಾಖೆಯಿಂದ ವಿವಿಧ ಕ್ರಮ ಕೈಗೊಳ್ಳಲಾಗಿದ್ದು, ಈವರೆಗೆ 74 ಅಬಕಾರಿ ದಾಳಿ ನಡೆಸಿ ಇಲ್ಲಿಯವರೆಗೆ 55 ಪ್ರಕರಣಗಳನ್ನು ದಾಖಲಿಸಿ, 33 ಆರೋಪಿಗಳನ್ನು ವಶಪಡಿಸಿಕೊಳ್ಳಲಾಗಿದೆ.
1,69,264 ರೂ. ಮೌಲ್ಯದ 386.71 ಲೀ. ಮದ್ಯ, 6400 ರೂ. ಮೌಲ್ಯದ 7.2 ಲೀ. ಹೊರ ರಾಜ್ಯದ ಮದ್ಯ, 8560 ರೂ. ಮೌಲ್ಯದ 35.75 ಲೀ. ಬೀಯರ್, 4250 ರೂ. ಮೌಲ್ಯದ 42.5 ಲೀ. ಕಳ್ಳಭಟ್ಟಿ ಸರಾಯಿ ಸೇರಿದಂತೆ 1,88,474 ರೂ. ಮೌಲ್ಯದ 472.16 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಿಗೆ ಬಳಸಿಕೊಳ್ಳಲಾಗಿರುವ 10,40,000 ರೂ. ಮೌಲ್ಯದ 19 ದ್ವಿಚಕ್ರ ವಾಹನ ಹಾಗೂ 2 ಲಕ್ಷ ರೂ. ಮೌಲ್ಯದ 01 ಕಾರು ಸೇರಿದಂತೆ ಒಟ್ಟು 12,44,000 ರೂ. ಮೌಲ್ಯದ 20 ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿನ್ನೆ ಒಂದೇ ದಿನ ಬೆಳಗಾವಿಯಲ್ಲಿ 2 ಕೋಟಿ 73 ಲಕ್ಷ ನಗದು ಜಪ್ತಿ.. ನಿನ್ನೆ ಒಂದೇ ದಿನ ಬೆಳಗಾವಿ ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ಗಳಲ್ಲಿ ದಾಖಲೆ ಇಲ್ಲದ 2 ಕೋಟಿ 73 ಲಕ್ಷ ರೂ. ನಗದು ವಶಪಡಿಸಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 62 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಬುಧವಾರ ಹಿರೇಬಾಗೇವಾಡಿ ಚೆಕ್ಪೋಸ್ಟ್ನಲ್ಲಿ 2 ಕೋಟಿ ರೂ. ಹಣ ವಶಪಡಿಸಿಕೊಂಡಿದ್ದರೆ, ಇತರೆ ಚೆಕ್ಪೋಸ್ಟ್ಗಳಲ್ಲಿ 73 ಲಕ್ಷ ರೂ. ಜಪ್ತಿ ಮಾಡಲಾಗಿದೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 2 ಕೋಟಿ 73 ಲಕ್ಷ ರೂ. ಸಿಕ್ಕಂತಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಸೂಕ್ತ ದಾಖಲೆ ಇಲ್ಲದ ಸುಮಾರು 9 ಕೋಟಿ 1 ಲಕ್ಷ ರೂ. ನಗದು ಹಾಗು 2 ಕೋಟಿ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಒಂದೇ ದಿನ 2 ಕೋಟಿ 73 ಲಕ್ಷ ರೂಪಾಯಿ ಜಪ್ತಿ- ಡಿಸಿ ಮಾಹಿತಿ