ಬೆಳಗಾವಿ : ಮಹಾನಗರಗಳಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಬೆಳಗಾವಿಯ ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಪ್ರಶಾಂತ್ ಕರೋಶಿ, ಅವಿನಾಶ್ ಅಡಾವಕರ್ ಬಂಧಿತರು. ಇವರಿಂದ 28 ಲಕ್ಷ ರೂ. ಮೌಲ್ಯದ ಚಿನ್ನಾಭರಣ 11.50 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ ಕುಳಿತೇ ಈ ಆರೋಪಿಗಳು ಗೂಗಲ್ ಮ್ಯಾಪ್ ಮೂಲಕ ನಗರದ ಹೊರವಲಯದ ಮನೆಗಳನ್ನು ಗುರುತಿಸುತ್ತಿದ್ದರು. ಬಳಿಕ ಆ ಪ್ರದೇಶಕ್ಕೆ ತೆರಳಿ ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು.
ಇತ್ತೀಚೆಗೆ ಲಕ್ಷ್ಮೀಟೇಕ್‌ನ ನಕ್ಷತ್ರ ಕಾಲೋನಿಯ ಆಸ್ಟನ್ ಜಾನ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಆಸ್ಟನ್ ಜಾನ್ ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ವಿಶೇಷ ತಂಡ ರಚಿಸಿ ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿ, ಇಬ್ಬರು ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ ಎಂದು ಅಪರಾಧ ವಿಭಾಗದ ಡಿಸಿಪಿ ಸಿ.ಆರ್. ನೀಲಗಾರ ಮಾಹಿತಿ ನೀಡಿದ್ದಾರೆ.