ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆ ಸಮೀಪಿಸುತ್ತಿದ್ದಂತೆ ಕುಂದಾ ನಗರಿ ಬೆಳಗಾವಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಬಿಜೆಪಿಗೆ ತಲೆ ನೋವಾಗಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಅವರದ್ದೇ ಪಕ್ಷದ ಹಿರಿಯ ನಾಯಕನಿಂದ ಬಂಡಾಯ ಭೀತಿ ಎದುರಾಗಿದೆ.
ಹೌದು, ಬೆಳಗಾವಿ ಜಿಲ್ಲೆಯ ಇಬ್ಬರು ಘಟಾನುಘಟಿ ಕಾಂಗ್ರೆಸ್ ನಾಯಕರ ಮಧ್ಯೆ ಶೀತಲ ಸಮರ ಏರ್ಪಟ್ಟಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕೆಲವೇ ದಿನಗಳಲ್ಲಿ ಚುನಾವಣೆ ಘೋಷಯಾಗಲಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಶತಕದ ಗಡಿ ತಲುಪುತ್ತಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕೈದು ಹೆಸರುಗಳು ಕೇಳಿ ಬರ್ತಿದೆ. ಅದರಲ್ಲಿಯೂ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ವಹಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ತಾವು ಸ್ಪರ್ಧೆಗೆ ಆಸಕ್ತಿ ವಹಿಸಿದ್ದಾಗಿ ನಾಯಕರ ಎದುರು ಹೇಳಿದ್ರು.
ಆದರೆ, ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಮೂವರು ಹೆಸರು ಶಿಫಾರಸು ಮಾಡಿದ್ದು ಪ್ರಕಾಶ್ ಹುಕ್ಕೇರಿ ಹೆಸರು ಶಿಫಾರಸು ಮಾಡಿಲ್ಲ ಎಂದಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಮೊದಲು ಬೆಳಗಾವಿ ಲೋಕಸಭಾ ಉಪಚುನಾವಣೆ ಘೋಷಣೆಯಾಗಲಿ. ಹೈಕಮಾಂಡ್ ನಿರ್ಣಯ ಕೈಗೊಂಡ ಮೇಲೆ ನಾನು ಮಾತನಾಡುತ್ತೇನೆ. ನನ್ನ ಹೆಸರು ಶಿಫಾರಸು ಆಗಿಲ್ಲ ಅಂದರೆ ಆಗಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷರು ಹೇಳಿದ್ರೆ ಅದಕ್ಕೆ ನಾನು ವಿರೋಧ ಮಾಡಲ್ಲ. ಮಾಡಿಲ್ಲ ಅಂದ್ರೆ ಇಲ್ಲ, ಅವರು ಹೇಳಿದ್ರೆ ಆಯ್ತು ಒಪ್ಪಿಕೊಳ್ಳಬೇಕಾಗುತ್ತೆ ಎಂದಿದ್ದಾರೆ. ಇನ್ನು ಬಿಜೆಪಿಗೆ ಬೆಂಬಲ ನೀಡುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ನಾನು ಈಗ ಉತ್ತರಿಸಲ್ಲ. ಸುಮ್ಮನೇ ತೊಂದರೆ ಮಾಡಬೇಡಿ ಎಂದಿದ್ದಾರೆ.
ಇತ್ತ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸುವಂತೆ ಸತೀಶ್ ಜಾರಕಿಹೊಳಿ ಮೇಲೆ ನಾಯಕರು ಒತ್ತಡ ಹೇರುತ್ತಿದ್ದಾರೆ. ಉಪಚುನಾವಣೆಗೆ ಸ್ಪರ್ಧಿಸುವಂತೆ ಖುದ್ದು ರಾಹುಲ್ ಗಾಂಧಿ ಕರೆ ಮಾಡಿದ್ದಾರೆ ಎಂಬ ಊಹಾಪೋಹ ಸುದ್ದಿ ಹರಿದಾಡುತ್ತಿತ್ತು. ಆದ್ರೆ ನನಗೆ ಯಾವುದೇ ರೀತಿಯಿಂದ ಕರೆ ಮಾಡಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಘೋಷಣೆ ಆದ ಬಳಿಕ ನಾವು ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡುತ್ತೇವೆ. ಯಾರು ಸ್ಪರ್ಧೆ ಮಾಡಬೇಕು ಎನ್ನುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಪ್ರಕಾಶ ಹುಕ್ಕೇರಿ ಬೆಳಗಾವಿ ಉಪಚುನಾವಣೆ ಸ್ಪರ್ಧೆಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆದ್ರೆ ಅವರದ್ದು, ಚಿಕ್ಕೋಡಿ ಲೋಕಸಭೆ ಕ್ಷೇತ್ರ, ಆ ಭಾಗಕ್ಕೆ ಸಿಮೀತವಾಗಿದ್ದಾರೆ. ಬೆಳಗಾವಿ ಲೋಕಸಭೆಗೆ ಮೂರ್ನಾಲ್ಕು ಹೆಸರುಗಳಿವೆ. ಯಾವುದು ಇನ್ನೂ ಅಂತಿಮವಾಗಿಲ್ಲ ಎಂದು ಪುನರುಚ್ಚಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ವರ್ಕರ್ ರಾಜಕಾರಣಿ ಎಂದೇ ಹೆಸರು ಪಡೆದಿರುವ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಈ ಹಿಂದೆ ಅಂಗಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಿದ್ರೆ ನನ್ನ ಮಗನ ಎಲೆಕ್ಷನ್ ರೀತಿ ಚುನಾವಣೆ ಮಾಡುವೆ. ಪಕ್ಷ ಏನೇ ಕ್ರಮ ಕೈಗೊಂಡರೂ ಅಂಗಡಿ ಕುಟುಂಬಕ್ಕೆ ಬೆಂಬಲಿಸುವೆ ಎಂದು ಹೇಳಿದ್ದರು. ಯಾವಾಗ ಅಂಗಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಸಿಗಲ್ಲ ಎಂಬ ಮಾತುಗಳು ಕೇಳಿ ಬರಲು ಆರಂಭಿಸಿದವೋ ತಮಗೆ ಟಿಕೆಟ್ ನೀಡುವಂತೆ ಪ್ರಕಾಶ್ ಹುಕ್ಕೇರಿ ಪಟ್ಟು ಹಿಡಿದಿದ್ದಾರೆ.
ಟಿಕೆಟ್ ಸಿಗದಿದ್ದರೇ ಪ್ರಕಾಶ್ ಹುಕ್ಕೇರಿ ಮುಂದಿನ ನಡೆ ಏನು ಎಂಬ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ತರಹೇವಾರು ಚರ್ಚೆಯಾಗುತ್ತಿದ್ದು ಕಳೆದ ಮೂರು ದಿನಗಳ ಹಿಂದೆ ಬೆಳಗಾವಿಗೆ ಆಗಮಿಸಿದ್ದ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಅವರನ್ನು ಪ್ರಕಾಶ ಹುಕ್ಕೇರಿ ಖಾಸಗಿ ಹೋಟೆಲ್ನಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ. ಇದನ್ನು ನೋಡಿದ್ರೆ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಭೀತಿ ಎದುರಾಗಲಿದೆ.