ಬೆಳಗಾವಿ: ಕೊರೊನಾ ನಿಯಂತ್ರಿಸಲು ಜಿಲ್ಲೆಯಲ್ಲಿ ಎರಡು ದಿನ ಜಿಲ್ಲಾಡಳಿತ ಸಂಪೂರ್ಣ ಲಾಕ್ಡೌನ್ ಘೋಷಿಸಿದೆ. ಹೀಗಾಗಿ ನಗರ ಸೇರಿ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ.
ವೈದ್ಯಕೀಯ ಸೇವೆ, ಔಷಧ, ಹಾಲು ಖರೀದಿ ಹಾಗೂ ಪೂರೈಕೆಗೆ ಮಾತ್ರ ಅವಕಾಶ ಇದೆ. ತರಕಾರಿ, ದಿನಸಿ, ಎಟಿಎಂ ಸೌಲಭ್ಯ ಸಂಪೂರ್ಣ ಎರಡು ದಿನ ಬಂದ್ ಮಾಡಲಾಗಿದೆ. ಹೀಗಾಗಿ ಮಾರುಕಟ್ಟೆ ಪ್ರದೇಶ ಹಾಗೂ ಜನದಟ್ಟಣೆಯಿಂದ ಕೂಡಿರುತ್ತಿದ್ದ ಪ್ರದೇಶಗಳು ಸಂಪೂರ್ಣವಾಗಿ ಭಣಗುಟ್ಟುತ್ತಿವೆ.
ವಾಹನಗಳು ಸೀಜ್: ಲಾಕ್ಡೌನ್ ಜಾರಿಗಾಗಿ ಮಹಾನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಡಾ. ವಿಕ್ರಮ ಆಮಟೆ ಬೆಳಗ್ಗೆಯಿಂದಲೇ ಫೀಲ್ಡಿಗಿಳಿದಿದ್ದಾರೆ. ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ಸ್ವತಃ ಡಿಸಿಪಿ ಆಮಟೆ ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದ 8 ವಾಹನಗಳನ್ನು ಡಿಸಿಪಿ ಸೀಜ್ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ಡಾ. ವಿಕ್ರಮ ಆಮಟೆ, ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತ ಎರಡು ದಿನ ಲಾಕ್ಡೌನ್ ಘೋಷಿಸಿದೆ. ಅನಗತ್ಯ ಓಡಾಟಕ್ಕೆ ಅವಕಾಶ ಇಲ್ಲ. ಹಾಗೇನಾದರೂ ಓಡಾಡಿದ್ರೆ ವಾಹನ ಸೀಜ್ ಮಾಡಿ ಪ್ರಕರಣ ದಾಖಲಿಸಲಾಗುವುದು. ಕೋರ್ಟ್ ಮೂಲಕವೇ ವಾಹನ ಬಿಡಿಸಿಕೊಳ್ಳಬೇಕಾಗುತ್ತದೆ ಎಂದರು.