ಬೆಳಗಾವಿ: ಮಹಾಮಾರಿ ಕೊರೊನಾ ಅಬ್ಬರಕ್ಕೆ ಜಿಲ್ಲೆಯಲ್ಲಿ ಮರಣ ಮೃದಂಗ ಮುಂದುವರೆದಿದ್ದು, ಬೆಳಗ್ಗೆಯಿಂದ ಈವರೆಗೂ ಸುಮಾರು 13 ಜನ ಕೋವಿಡ್ಗೆ ಬಲಿಯಾಗಿದ್ದಾರೆ. ನಿಯಮಾವಳಿ ಪ್ರಕಾರ ಇಂದು ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎನ್ನಲಾಗಿದೆ.
ಇಲ್ಲಿನ ಸದಾಶಿವನಗರ ಸ್ಮಶಾನದಲ್ಲಿ ಇಂದು ಒಂದೇ ದಿನ 13 ಜನರ ಅಂತ್ಯಕ್ರಿಯೆ ಮಾಡಲಾಗುತ್ತಿದೆ ಎಂದು ಸ್ಮಶಾನದ ಬಳಿ ನಿಯೋಜಿತ ಮಹಾನಗರ ಪಾಲಿಕೆ ಸಿಬ್ಬಂದಿ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಈಟಿವಿ ಭಾರತಕ್ಕೆ ನೀಡಿದ್ದಾರೆ. ಸದ್ಯ ಸ್ಮಶಾನದಲ್ಲಿ ಏಕಕಾಲಕ್ಕೆ 7 ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎನ್ನಲಾಗಿದೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಇಂದು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಓರ್ವ ಸೋಂಕಿತ ಮಾತ್ರ ಸಾವನ್ನಪ್ಪಿದ್ದಾಗಿ ಹೇಳಲಾಗುತ್ತಿದೆ.
ಹೀಗಾಗಿ ಕೊರೊನಾ ರೋಗದಿಂದ ಸಾವನ್ನಪ್ಪುತ್ತಿರುವವರ ಪ್ರಮಾಣವನ್ನು ಜಿಲ್ಲಾಡಳಿತವೇ ಮುಚ್ಚಿಡುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ. ಬಹಳಷ್ಟು ಜನರು ಕೋವಿಡ್ ಟೆಸ್ಟ್ ಮಾಡಿಸದೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಓದಿ: ಕೊರೊನಾ ನಿಯಮ ಮೀರಿದವರಿಗೆ ಶಾಕ್ ಕೊಟ್ಟ ಪೊಲೀಸರು: ಬೆಂಗಳೂರಲ್ಲಿ 5 ಸಾವಿರ ವಾಹನಗಳು ಜಪ್ತಿ