ಬೆಳಗಾವಿ: ದೇಶದ ಅಭಿವೃದ್ಧಿ ಹಾಗೂ ಉದ್ಯಮ ಕ್ಷೇತ್ರದ ಪ್ರಗತಿಯಲ್ಲಿ ಸಣ್ಣ ಕೈಗಾರಿಕೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಬೆಳಗಾವಿ ಜಿಲ್ಲೆಯ ಸಣ್ಣ ಕೈಗಾರಿಕೆಗಳು ಇದೀಗ ಚೇತರಿಕೆಯತ್ತ ಹೆಜ್ಜೆ ಇಡುತ್ತಿದೆ. ಈ ಬೆಳವಣಿಗೆ ಜಿಲ್ಲೆಯ ಕೈಗಾರಿಕೋದ್ಯಮಿಗಳಿಗೆ ಹೊಸ ಆಶಾಭಾವನೆ ಮೂಡಿಸಿದೆ.
ರಾಜಧಾನಿ ಬೆಂಗಳೂರು ನಂತರ ದೇಶ-ವಿದೇಶಗಳಲ್ಲಿರುವ ಎಲ್ಲ ಬಗೆಯ ಉದ್ಯಮಗಳಿಗೆ ಬೆಳಗಾವಿಯಿಂದಲೇ ಅತಿ ಹೆಚ್ಚು ಬಿಡಿಭಾಗಗಳ ಪೂರೈಕೆಯಾಗುತ್ತದೆ. ಆಟೋಮೊಬೈಲ್ ಕ್ಷೇತ್ರ, ಎಲ್ಲ ಬಗೆಯ ಯಂತ್ರಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳು ಇಲ್ಲಿಂದ ಅಧಿಕ ಪ್ರಮಾಣದಲ್ಲಿ ರಫ್ತಾಗುತ್ತದೆ.
ಅಮೇರಿಕಾ, ರಷ್ಯಾ, ಜಪಾನ್, ಚೀನಾ ಸೇರಿದಂತೆ ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಸೇರಿದಂತೆ ಅನೇಕ ಕಡೆ ಇಲ್ಲಿನ ಕೈಗಾರಿಕೋದ್ಯಮಿಗಳು ಅತಿಹೆಚ್ಚು ಪ್ರಮಾಣದಲ್ಲಿ ಬಿಡಿಭಾಗಗಳನ್ನು ರಫ್ತು ಮಾಡುತ್ತಾರೆ. ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ಎರಡು ತಿಂಗಳ ಕಾಲ ಲಾಕ್‍ಡೌನ್ ಹೇರಿದರ ಪರಿಣಾಮ ಬಿಡಿಭಾಗಗಳ ಬೇಡಿಕೆ ಹಾಗೂ ಪೂರೈಕೆಯಲ್ಲಿ ಕುಸಿತವಾಗಿತ್ತು. ಇದೀಗ ಲಾಕ್‍ಡೌನ್ ಸಡಿಲಿಕೆಯಾಗಿದ್ದು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡಿಭಾಗಗಳ ಬೇಡಿಕೆಯೂ ಹೆಚ್ಚುತ್ತಿದೆ. ಪ್ರಸ್ತುತ ಶೇ. 60ರಷ್ಟು ಬಿಡಿಭಾಗಗಳನ್ನು ರಫ್ತು ಮಾಡಲಾಗುತ್ತಿದ್ದು, ಶೀಘ್ರವೇ ಮತ್ತಷ್ಟು ಬೇಡಿಕೆ ಹೆಚ್ಚುವ ನಿರೀಕ್ಷೆಯಲ್ಲಿ ಇಲ್ಲಿನ ಉದ್ಯಮಿಗಳಿದ್ದಾರೆ.
ಕಚ್ಛಾವಸ್ತುಗಳ ಪೂರೈಕೆ ಸ್ಥಗಿತದಿಂದ ಹೊಡೆತ!
ಬೆಳಗಾವಿಯ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಮುಂಬೈನಿಂದಲೇ ಅತಿಹೆಚ್ಚು ಕಚ್ಚಾವಸ್ತುಗಳು ಪೂರೈಕೆಯಾಗುತ್ತದೆ. ಜಿಲ್ಲೆಯಲ್ಲಿ 30 ಸಾವಿರಕ್ಕೂ ಅಧಿಕ ಸಣ್ಣ ಕೈಗಾರಿಕೆಗಳಿದ್ದು, ಬಹುತೇಕ ಉದ್ಯಮಿಗಳು ಕಚ್ಚಾವಸ್ತುಗಳಿಗೆ ಮುಂಬೈಯನ್ನೇ ಅವಲಂಬಿಸಿದ್ದಾರೆ. ಕೊರೊನಾ ನಿಯಂತ್ರಿಸಲು ಇಡೀ ದೇಶಾದ್ಯಂತ ಎರಡು ತಿಂಗಳು ಕಾಲ ಲಾಕ್‍ಡೌನ್ ಹೇರಿದ್ದರ ಪರಿಣಾಮ ಕಚ್ಚಾವಸ್ತುಗಳ ಆಮದು ಸ್ಥಗಿತಗೊಂಡಿತ್ತು. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿದ್ದ ಎಲ್ಲ ಬಗೆಯ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಲಾಕ್‍ಡೌನ್ ಸಡಿಲಿಕೆಯಿಂದ ಕಚ್ಚಾವಸ್ತುಗಳು ಆಮದು ಆಗುತ್ತಿರುವುದರಿಂದ ಬಿಡಿಭಾಗಗಳ ಪೂರೈಕೆ ಪ್ರಮಾಣದಲ್ಲಿಯೂ ಏರಿಕೆ ಕಾಣುತ್ತಿದೆ.
ಕೊರೊನಾ ಆತಂಕದಿಂದ ಜನರು ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆ ಬಳಕೆ ಕಡಿಮೆ ಮಾಡುತ್ತಿದ್ದಾರೆ. ಅನೇಕರು ಹೊಸ ಬೈಕ್ ಹಾಗೂ ಕಾರುಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಾರು, ಬೈಕ್‍ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ವಾಹನ ತಯಾರಿಕಾ ಕಂಪನಿಗಳು ಕೂಡ ಬಿಡಿಭಾಗಗಳಿಗೆ ಹೆಚ್ಚಿನ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ವಲಸೆ ಕಾರ್ಮಿಕರ ಅಭಾವ ಬೆಳಗಾವಿ ಜಿಲ್ಲೆಯಲ್ಲಿರುವ ಬಹುತೇಕ ಕೈಗಾರಿಕೆಗಳಲ್ಲಿ ಹೊರ ರಾಜ್ಯಗಳ ವಲಸೆ ಕಾರ್ಮಿಕರೇ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಈ ಎಲ್ಲರೂ ಕೊರೊನಾದ ಆತಂಕದಿಂದ ತವರಿಗೆ ಮರಳಿದ್ದಾರೆ. ಲಾಕ್‍ಡೌನ್ ಸಡಿಲಿಕೆ ಆದರೂ ಇವರು ಮರಳದ ಕಾರಣ ಕಾರ್ಮಿಕರ ಸಮಸ್ಯೆ ತಲೆದೂರಿದೆ. ಹೀಗಾಗಿ ಬೇಡಿಕೆ ಇದ್ದರೂ ನಿಗದಿತ ಸಮಯದಲ್ಲಿ ಬಿಡಿಭಾಗಗಳನ್ನು ಪೂರೈಸುವುದು ಸದ್ಯ ಸವಾಲಿನ ಕೆಲಸವಾಗಿದೆ. ವಲಸೆ ಕಾರ್ಮಿಕರು ಮರಳಿದರೆ ನಿಗದಿತ ಸಮಯದಲ್ಲಿ ಬಿಡಿಭಾಗಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜವಳಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಕೊರೊನಾ ಬಗ್ಗೆಯೂ ಮುಂಜಾಗೃತ ಕ್ರಮ: ಬೆಳಗಾವಿ ಜಿಲ್ಲೆಯ ಆರು ಕೈಗಾರಿಕಾ ವಸಾಹತುಗಳಿದ್ದು, 30 ಸಾವಿರಕ್ಕೂ ಅಧಿಕ ಬೃಹತ್, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿವೆ. ಕೊರೊನಾ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ಕೈಗಾರಿಕೆಗಳಲ್ಲಿ ಸಿಬ್ಬಂದಿಯ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸ್ಕ್ರೀನಿಂಗ್, ಸ್ಯಾನಿಟೈಜರ್ ಹಾಗೂ ಕೆಲಸದ ಸಮಯದಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಅನೇಕ ಕಂಪನಿಗಳು ಸಿಬ್ಬಂದಿ ಮಾಸ್ಕ್ ಧರಿಸಿದ್ದಾರೋ? ಇಲ್ಲವೋ ಎಂದು ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿ ನೇಮಿಸಿರುವುದು ವಿಶೇಷ.